ಕರ್ನಾಟಕ

ರಾಜ್ಯದಲ್ಲಿ ಕೊರೋನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದೆ!

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ನಡುವಲ್ಲೇ ಗುಣಮುಖರಾಗುತ್ತಿರುವ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಜನರಲ್ಲಿನ ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬುಧವಾರ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅತೀ ಹೆಚ್ಚು 54 ಸಾವು ಕೂಡ ಸಂಭವಿಸಿದೆ. ಇದರೊಂದಿಗೆ ಕರುನಾಡು ಕೊರೋನಾ ಕರಾಳ ಮುಷ್ಟಿಗೆ ಸಿಲುಕಿದಂತಾಗಿದೆ.

ರಾಜ್ಯವು ಇದೀಗ ಸೋಂಕು ಮತ್ತು ಸಾವು ಎರಡಲ್ಲೂ ಮಹಾಮಾರಿ ಕೊರೋನಾ ವೈರಸ್ ರಾಜ್ಯದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದಂತಾಗಿದೆ.

ಕಳೆದ ಜುಲೈ.5ರಂದು ರಾಜ್ಯದಲ್ಲಿ ಒಂದೇ ದಿನ 1925 ಕೊರೋನಾ ಸೋಂಕು ದೃಢಪಟ್ಟಿತ್ತು. ಜುಲೈ.4ರಂದು 42 ಮಂದಿ ಸೋಂಕಿತರು ಮೃತಪಟ್ಟಿದ್ದು, ಈ ವರೆಗಿನ ಏಕದಿನದ ದಾಖಲೆಯಾಗಿತ್ತು. ಇದೀಗ ಈ ದಾಖಲೆ ಪುಡಿಗಟ್ಟಿ ಬುಧವಾರ ರಾಜ್ಯದಲ್ಲಿ 2,062 ಮಂದಿಗೆ ಸೋಂಕು ದೃಢಪಟ್ಟಿದೆ. ಜೊತೆಗೆ ಕೋವಿಡ್ 54 ಬಲಿಪಡೆದಿದೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 28,877ಕ್ಕೆ, ಸಾವಿನ ಸಂಖ್ಯೆ 470ಕ್ಕೆ ಏರಿಕೆಯಾಗಿದೆ.

ಇನ್ನು ರಾಜ್ಯದಲ್ಲಿ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಶೇಕಡಾವಾರು ಕೇವಲ 41.12ರಷ್ಟಿದೆ. 2,23,724 ಮಂದಿ ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಚೇತರಿಕೆ ಪ್ರಮಾಣ ಶೇ. 54.60 ರಷ್ಟಿದ್ದು, ದೇಶದಲ್ಲಿ ಒಟ್ಟಾರೆ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇ.61.64 ರಷ್ಟಿದೆ.

ರಾಜ್ಯದಲ್ಲಿ ಸೋಂಕಿನ ಪ್ರಮಾಣ ದೇಶದಲ್ಲೇ ಅತೀ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದ್ದು, ಕೇವಲ 9 ದಿನಗಳಲ್ಲೇ ಸೋಂಕು ದ್ವಿಗುಣಗೊಳ್ಳುತ್ತಿದೆ. ಸೋಂಕು ದ್ವಿಗುಣ ಪ್ರಮಾಣ ರಾಷ್ಟ್ರೀಯ ಸರಾರಿ 20 ದಿನಗಳಿದ್ದರೆ, ರಾಜ್ಯದಲ್ಲಿ 9 ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಅಲ್ಲದೆ, ಪ್ರತಿ 6 ದಿನಕ್ಕೊಮ್ಮೆ ದ್ವಿಗುಣಗೊಳ್ಳುವ ಮೂಲಕ ಬೆಂಗಳೂರಿನಲ್ಲಿ ಇನ್ನೂ ತೀವ್ರಗತಿಯಲ್ಲಿ ಸೋಂಕು ವೃದ್ಧಿಗೊಲ್ಳುತ್ತಿದೆ.

ದೇಶದ ಅತೀ ಹೆಚ್ಚು ಸೋಂಕಿತ ಸಂಖ್ಯೆಯನ್ನು ಹೊಂದಿರುವ 10 ರಾಜ್ಯಗಳ ಪೈಕಿ 1,02,831 ಸೋಂಕಿತರನ್ನು ಹೊಂದಿರುವ ದೆಹಲಿ ಮೂರನೇ ಸ್ಥಾನದಲ್ಲಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಚೇತರಿಕೆ ಪ್ರಮಾಣ ಶೇ.72.17ರಷ್ಟಿದೆ. ಇನ್ನು ಗುಜರಾತ್ ನಲ್ಲಿ 38,419 ಪ್ರಕರಣಗಳಿದ್ದು, ಚೇತರಿಕೆ ಪ್ರಮಾಣ 71.09 ರಷ್ಟಿದೆ. ಇನ್ನು ಉತ್ತರಪ್ರದೇಶದಲ್ಲಿ 31,156 ಪ್ರಕರಣಗಳಿದ್ದರೆ, ಚೇತರಿಕೆ ಪ್ರಮಾಣ 65.25, ತಮಿಳುನಾಡು 1,22,350 ಪ್ರಕರಣಗಳಿದ್ದರೆ, ಶೇ.59.96 ಚೇತರಿಕೆ ಪ್ರಮಾಣವಿದೆ. ಕರ್ನಾಟಕದಲ್ಲಿ ಜುಲೈ.5 ರ ಬಳಿಕ ಚೇತರಿಕೆ ಪ್ರಮಾಣ 41.12ಕ್ಕೆ ಇಳಿದಿದೆ.

ಇನ್ನು ಸಾವಿನ ಪ್ರಮಾಣಕ್ಕೆ ಬಂದರೆ, ಗುಜರಾತ್ ನಲ್ಲಿ ಶೇ.5.19, ಮಹಾರಾಷ್ಟ್ರ ಶೇ.4.2, ದೆಹಲಿ ಶೇ.3.07. ಉತ್ತರಪ್ರದೇಶ ಶೇ.2.71, ತೆಲಂಗಾಣ ಶೇ.1.13, ತಮಿಳುನಾಡು ಶೇ.1.37ರಷ್ಟಿದೆ.

Comments are closed.