ಚಿಕ್ಕಮಗಳೂರು (ಜು. 5): ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯ ಫಿಸಿಷಿಯನ್, ಬೆಂಗಳೂರು ಪೊಲೀಸ್ ತರಬೇತಿ ಕೇಂದ್ರದಲ್ಲಿದ್ದ ತಾಲೂಕಿನ ಮಲ್ಲೇದೇವರಹಳ್ಳಿಯ ಪೊಲೀಸ್ ಹಾಗೂ ಕಡೂರು ತಾಲೂಕು ಹಿರೇನಲ್ಲೂರಿನ ಕಂಡಕ್ಟರ್ ಒಬ್ಬರಿಗೆ ಶನಿವಾರ ಕೊರೋನಾ ಪಾಸಿಟಿವ್ ಬಂದಿರುವುದರಿಂದ ಕಾಫಿನಾಡಿನ ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ.
ವೈದ್ಯ ಹಾಗೂ ಕಂಡಕ್ಟರ್ ಈ ಎರಡೂ ಪ್ರಕರಣಗಳು ಕೂಡ ಜಿಲ್ಲಾಡಳಿತ ಹಾಗೂ ಜನರ ಆತಂಕವನ್ನು ಹೆಚ್ಚಾಗಿಸಿದೆ. ವೈದ್ಯ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಯ ವೈದ್ಯರಾಗಿದ್ದು, ಇದೀಗ ಆಸ್ಪತ್ರೆಯನ್ನ ಸೀಲ್ಡೌನ್ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯ ವೈದ್ಯರಿಗೂ ಕೊರೋನಾ ಪಾಸಿಟಿವ್ ಬಂದಿದ್ದು ನಗರ ನಿವಾಸಿಗಳ ಆತಂಕ ಹೆಚ್ಚಾಗಿದೆ. ಇಂದು ಪಾಸಿಟಿವ್ ಬಂದಿರೋ ವೈದ್ಯ ಆಸ್ಪತ್ರೆಯೊಳಗೆ ಓಡಾಟ ನಡೆಸಿರುವುದರಿಂದ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಜನರನ್ನ ಕ್ವಾರಂಟೈನ್ ಮಾಡಲಾಗಿದೆ.
ಇನ್ನು, ಕಂಡಕ್ಟರ್ ಕೂಡ ಜಿಲ್ಲೆಯ ಕಡೂರು ತಾಲೂಕಿನ ಚೌಳ ಹಿರಿಯೂರಿನವರರು. ಪ್ರತಿದಿನ ಅರಸೀಕೆರೆಯಿಂದ ಹಾಸನ ಮಾರ್ಗವಾಗಿ ಓಡಾಡುತ್ತಿದ್ದರು. ಡ್ಯೂಟಿ ಮುಗಿಸಿ ಅರಸೀಕೆರೆಯಿಂದ ಚೌಳಹಿರಿಯೂರಿಗೆ ಬೈಕ್ನಲ್ಲಿ ಬಂದು ಮನೆಯಲ್ಲಿದ್ದು, ಮತ್ತೆ ಡ್ಯೂಟಿ ಇದ್ದ ದಿನ ಹೋಗುತ್ತಿದ್ದರು. ಈಗ ಅವರಿಗೂ ಕೊರೋನಾ ದೃಢವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಈಗ ಕಂಡಕ್ಟರ್ಗೆ ಕೊರೋನಾ ಬಂದಿರುವುದರಿಂದ ಇವರಿಗೆ ಅಂಟಿಸಿದ್ದು ಯಾರು? ಅನ್ನೋ ಆತಂಕದ ಜೊತೆ, ಕಂಡಕ್ಟರ್ ಇನ್ನೆಷ್ಟು ಜನಕ್ಕೆ ಸೋಂಕು ಅಂಟಿಸಿರಬಹುದೆಂಬ ಸಂಶಯ ಮೂಡಿದೆ. ಸಾಲದ್ದಕ್ಕೆ ಕಂಡಕ್ಟರ್ ಗ್ರಾಮದಲ್ಲಿ ತೋಟ-ಮನೆಗೆಲ್ಲ ಓಡಾಡಿದ್ದಾರೆ. ಇದರಿಂದ ಗ್ರಾಮಸ್ಥರು ಕೊರೋನಾ ಆತಂಕದಿಂದ ಬದುಕುವಂತಾಗಿದೆ. ಈಗಾಗಲೇ ತಾಲೂಕು ಆಡಳಿತ ಕಂಡಕ್ಟರ್ನ ಪ್ರಾಥಮಿಕ ಸಂಪರ್ಕದಲ್ಲಿದ್ದ ಹನ್ನೆರಡಕ್ಕೂ ಹೆಚ್ಚು ಜನರನ್ನ ಕ್ವಾರಂಟೈನ್ಗೆ ಸೂಚಿಸಿದೆ.
ಇನ್ನು ಬೆಂಗಳೂರಿನ ಪೊಲೀಸ್ ತರಬೇತಿ ಕೇಂದ್ರದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಗೂ ಕೊರೋನಾ ಪಾಸಿಟಿವ್ ಬಂದಿದ್ದು ಅವರ ಪ್ರಾಥಮಿಕ ಸಂಪರ್ಕದವರನ್ನ ಪತ್ತೆ ಹಚ್ಚಲಾಗುತ್ತಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ನೆಮ್ಮದಿಯಿಂದಿದ್ದ ಜನ ಇಂದು ಕೊರೋನಾ ಆತಂಕದಲ್ಲೇ ಬದುಕುವಂತಾಗಿದೆ.
Comments are closed.