ಕರ್ನಾಟಕ

ಕೊರೋನಾ ಸೋಂಕಿತಳಿಂದ 30 ಜನರಿಗೆ ಸೋಂಕು, ರಾಯಚೂರು ಜಿಲ್ಲಾಡಳಿತಕ್ಕೆ ಹೊಸ ತಲೆನೋವು

Pinterest LinkedIn Tumblr


­ರಾಯಚೂರು (ಜುಲೈ 05): ರಾಜ್ಯದಲ್ಲಿ ಕೊರೋನಾ ಸೋಂಕಿತರು ಮಾರ್ಚ್‌ ತಿಂಗಳಿನಿಂದ ಪತ್ತೆಯಾಗುತ್ತಿದ್ದರೂ ರಾಯಚೂರು ಜಿಲ್ಲೆಗೆ ಸೋಂಕು ಎಂಟ್ರಿ ಕೊಟ್ಟಿದ್ದು ಮೇ 17 ರ ನಂತರವೇ. ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಆಗಮಿಸುತ್ತಿದ್ದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಯಿತು. ಆದರೆ, ಇದೀಗ ಜಿಲ್ಲೆಯಲ್ಲಿ ಓರ್ವ ಮಹಿಳೆಯಿಂದ ಬರೋಬ್ಬರಿ 30 ಜನರಿಗೆ ಸೋಂಕು ಹರಡಿರುವುದು ಇಡೀ ಜಿಲ್ಲಾಡಳಿತಕ್ಕೆ ತಲೆನೋವಿನ ಸಂಗತಿಯಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ಮೇ 17 ರಿಂದ ಜೂ.18 ರವರೆಗೆ ನಿತ್ಯ 2 ರಿಂದ 88 ರವರೆಗೂ ಸೋಂಕು ತಗುಲಿರುವುದು ದೃಡವಾಗಿತ್ತು, ಜೂ.18 ರ ನಂತರ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ 0-15 ರೊಳಗೆ ಇದ್ದ ಸಂಖ್ಯೆ ಶನಿವಾರ ಒಂದೇ ದಿನ 41 ಜನರಿಗೆ ಸೋಂಕು ದೃಡಪಟ್ಟಿದೆ. 41 ಜನರಲ್ಲಿ ಒಬ್ಬ ಸೋಂಕಿತ ಮಹಿಳೆಯಿಂದ 26 ಜನರಿಗೆ ಸೋಂಕು ಬಂದಿರುವುದು ದೃಡಪಟ್ಟಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಒಟ್ಟು 559 ಸೋಂಕಿತರು ಪತ್ತೆಯಾಗಿದ್ದು ಈಗ 131 ಸಕ್ರಿಯ ಪ್ರಕರಣಗಳಿವೆ ಎನ್ನಲಾಗುತ್ತಿದೆ.

ಜೂ.20 ರಂದು ಮಸ್ಕಿ ತಾಲೂಕಿನ‌ 35 ವರ್ಷದ ಮಹಿಳೆಗೆ ಸೋಂಕು ದೃಡ ಪಟ್ಟಿದೆ. ಈ‌ ಮಹಿಳೆ ಕೊಪ್ಪಳ ಜಿಲ್ಲೆಯ ಮರಳಿಯಲ್ಲಿಯ ಸಂಬಂಧಿಕರ ಮದುವೆಗೆ ಹೋಗಿ ಬಂದಿದ್ದಳು ನಂತರ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಅನಾರೋಗ್ಯದ ಮಧ್ಯೆಯೂ ಸಿಂಧನೂರಿನಲ್ಲಿ ಪ್ರಸಿದ್ದ ಬಟ್ಟೆ ಅಂಗಡಿಯಾದ ಅಮರದೀಪ ಕ್ಲಾತ್ ಸೆಂಟರ್ ಬಟ್ಟೆ ಖರೀದಿಸಿದ್ದಳು.

ಆಕೆಗೆ ಸೋಂಕು ದೃಡಪಟ್ಟ ನಂತರ ಐಸೋಲೆಷನ್ ಮಾಡಲಾಗಿದೆ. ಆಕೆಯ ಸಂಪರ್ಕಿತರ ಪತ್ತೆ ಮಾಡಿ ಸ್ವ್ಯಾಬ್ ತೆಗೆಯಲಾಗಿದೆ. ಅಮರದೀಪ ಕ್ಲಾತ್ ಸೆಂಟರ್ ಒಂದರಲ್ಲಿಯೇ ಒಟ್ಟು 15 ಜನರಿಗೆ ಸೋಂಕು ತಗುಲಿದೆ. ಇನ್ನೂ ಖಾಸಗಿ ಆಸ್ಪತ್ರೆಯ ಇಬ್ಬರಿಗೆ ಸೋಂಕು ದೃಡಪಟ್ಟಿದೆ. ಇದೇ ಮಹಿಳೆಯಿಂದ ಸಾಲಗುಂದಾ, ಗೊರೇಬಾಳದಲ್ಲಿಯೂ ಸೋಂಕು ತಗುಲಿದೆ. ಈ ಮಹಿಳೆಯ ಸಂಪರ್ಕದಿಂದಾಗಿ‌ ಮಾನವಿ ತಾಲೂಕಿನಲ್ಲಿ ಜೂ.27 ರಂದು 45 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

Comments are closed.