ಕರ್ನಾಟಕ

ಕೊರೋನಾ ಚಿಕಿತ್ಸೆ 73 ಖಾಸಗಿ ಆಸ್ಪತ್ರೆಗಳ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

Pinterest LinkedIn Tumblr


ಬೆಂಗಳೂರು (ಜುಲೈ 03); ನಗರದಲ್ಲಿ ಕೊರೋನಾ ವೈರಸ್‌ ಹಾವಳಿ ದಿನದಿಂದ ದಿನಕ್ಕೆ ಏರುತ್ತಿದ್ದು, ಕೊನೆಗೂ ಕೊರೋನಾಗೆ ಚಿಕಿತ್ಸೆ ಸಿಗುವ 73 ಖಾಸಗಿ ಆಸ್ಪತ್ರೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಇಂದು ಬಿಡುಗಡೆ ಮಾಡಿದೆ. ಅಲ್ಲದೆ, ಈ ಎಲ್ಲಾ ಆಸ್ಪತ್ರೆಗಳಲ್ಲೂ ಶೇ.50 ರಷ್ಟು ಹಾಸಿಗೆಗಳನ್ನು ಕೊರೋನಾ ಪೀಡಿತ ರೋಗಿಗಳಿಗೆ ಮೀಸಲಿಡಬೇಕು ಎಂದು ಸೂಚಿಸಿದೆ.

ವೈದೇಹಿ, ಎಂಎಸ್ ರಾಮಯ್ಯ, ಬಿಜಿಎಸ್, ಅಪೊಲೊ ಸೇರಿದಂತೆ 73 ಖಾಸಗಿ ಆಸ್ಪತ್ರೆಗಳ ಪಟ್ಟಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ, ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಈ ಯಾವ ಆಸ್ಪತ್ರೆಗಳೂ ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ ಎಂದೂ ಸೂಚಿಸಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಮತ್ತು ಅದಕ್ಕೆ ಇಂತಿಷ್ಟೇ ದರ ನಿಗದಿಪಡಿಸಬೇಕು ಎಂದು ಕೂಗು ಹಲವು ದಿನಗಳಿಂದ ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಸಹ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಜೊತೆಗೆ ಹಲವು ಬಾರಿ ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕೊನೆಗೂ ಆಸ್ಪತ್ರೆಗಳನ್ನು ಫೈನಲ್ ಮಾಡಿ ಇಂದು ಪಟ್ಟಿ ಬಿಡುಗಡೆ ಮಾಡಲಾಗಿದೆ.

ಇದರ ಪ್ರಕಾರ ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಕೊರೋನಾ ರೋಗಿಗಳನ್ನು ಕೇಂದ್ರೀಕೃತ ಹಂಚಿಕೆ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಕಳಿಸಲಾಗುತ್ತದೆ. ರೋಗಿಗಳು ಬೇಕಿದ್ದರೆ ಸರ್ಕಾರ ನಿಗದಿ ಪಡಿಸಿರುವ ದರ ನೀಡಿ, ರಕ್ತ ಪರೀಕ್ಷೆ ಮಾಡಿರುವ ವರದಿಯ ಸಮೇತ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ನೇರವಾಗಿ ಚಿಕಿತ್ಸೆ ಪಡೆಯಬಹುದು.

ಲ್ಯಾಬ್ ರಿಪೋರ್ಟ್ ಇಲ್ಲದಿದ್ದರೂ ಸಹ ತೀವ್ರ ಅನಾರೋಗ್ಯಕ್ಕೀಡಾದ ರೋಗಿಗೆ ಈ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುವಂತಿಲ್ಲ. ಸೋಂಕಿತರು ತಮಗೆ ಯಾವುದೇ ಅನಾನುಕೂಲ ಉಂಟಾದರೂ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಬಹುದು ಎಂದು ರಾಜ್ಯ ಸರ್ಕಾರ ತಿಳಿಸಲಾಗಿದೆ.

Comments are closed.