ಶಿವಮೊಗ್ಗ: ಕೊರೋನಾ ಎದುರಿಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗಳ ಸೌಲಭ್ಯಗಳನ್ನು ಬಳಸಿಕೊಳ್ಳಲು ಜಿಲ್ಲಾಡಳಿತ ಸಿದ್ಧಗೊಂಡಿದೆ. ಜಿಲ್ಲೆಯಲ್ಲಿ ಇದುವರೆಗೆ 151 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಪ್ರಸ್ತುತ 45 ಜನರು ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋವಿಡ್ ಬೆಡ್ಗಳ ಸಂಖ್ಯೆಯನ್ನು 250 ಕ್ಕೆ ಹೆಚ್ಚಿಸಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ನೋಂದಣಿಯಾಗಿರುವ 21 ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ ನೀಡುವ ಕುರಿತು ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಈ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ಗಳು ಸೇರಿದಂತೆ ವೈದ್ಯಕೀಯ ಸೌಲಭ್ಯಗಳ ಕುರಿತು ಈಗಾಗಲೇ ನೀಡಿರುವ ಮಾಹಿತಿಯನ್ನು ಗೂಗಲ್ ಶೀಟ್ನಲ್ಲಿ ನವೀಕರಿಸಬೇಕು. ಕೆಪಿಎಂಎ ವೈದ್ಯಾಧಿಕಾರಿಗಳ ತಂಡ ಈ ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಲಭ್ಯ ಸೌಲಭ್ಯಗಳ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಇದುವರೆಗೆ 151 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಪ್ರಸ್ತುತ 45ಮಂದಿ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೆಡ್ಗಳ ಲಭ್ಯತೆಯನ್ನು 250ಕ್ಕೆ ಹೆಚ್ಚಿಸಲಾಗಿದೆ. ಒಟ್ಟು 80 ವೆಂಟಿಲೇಟರ್ಗಳು ಸೇರಿದಂತೆ ಎಲ್ಲಾ ಅಗತ್ಯ ಮೂಲಸೌಲಭ್ಯ ಇಲ್ಲಿ ಲಭ್ಯವಿದೆ. ಒಂದು ವೇಳೆ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳ ಸೌಲಭ್ಯವನ್ನು ಬಳಸಿಕೊಳ್ಳಲಾಗುವುದು. ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿನ ಶೇ.50ರಷ್ಟು ಬೆಡ್ಗಳನ್ನು ಅಂತಹ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತಕ್ಕೆ ಒದಗಿಸಬೇಕು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ ಯಾವುದೇ ರೋಗ ಲಕ್ಷಣಗಳಿಲ್ಲದ ಕೊರೋನಾ ಪಾಸಿಟಿವ್ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಹಾಸ್ಟೆಲ್ಗಳು ಒಳಗೊಂಡಂತೆ ಕೋವಿಡ್ ಕೇರ್ ಸೆಂಟರ್ಗಳನ್ನು ಈಗಾಗಲೇ ಗುರುತಿಸಲಾಗಿದೆ. ಒಟ್ಟು 2225 ಬೆಡ್ ಸೌಲಭ್ಯಗಳಿರುವ ಕೋವಿಡ್ ಕೇರ್ ಸೆಂಟರ್ಗಳನ್ನು ಗುರುತಿಸಿ ಸಜ್ಜುಗೊಳಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ.
ಅಗತ್ಯ ಬಿದ್ದರೆ ಖಾಸಗಿ ವೈದ್ಯರ ಸೇವೆಯನ್ನು ಪಡೆದುಕೊಳ್ಳಲಾಗುವುದು. ಯಾವುದೇ ಆಸ್ಪತ್ರೆಗಳು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ದೀರ್ಘ ಕಾಲದ ರಜೆ ನೀಡಬಾರದು. ರಜೆ ನೀಡುವ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿಯನ್ನು ಒದಗಿಸಬೇಕು. ಕೊರೋನಾ ಪಾಸಿಟಿವ್ ವ್ಯಕ್ತಿಗಳಿಗೆ ಚಿಕಿತ್ಸೆಯನ್ನು ಮೆಗ್ಗಾನ್ನಲ್ಲಿಯೇ ನೀಡಲು ಆದ್ಯತೆ ನೀಡಲಾಗುವುದು. ಖಾಸಗಿ ಆಸ್ಪತ್ರೆಗಳಿಗೆ ಪಾಸಿಟಿವ್ ವ್ಯಕ್ತಿಯನ್ನು ಕಳುಹಿಸುವ ಮೊದಲು ತಜ್ಞ ಸಮಿತಿಯಿಂದ ಅಭಿಪ್ರಾಯ ಪಡೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬೇಕಾದ ಎಲ್ಲಾ ರೀತಿ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಸಾರ್ವಜನಿಕರು ಜಿಲ್ಲಾಡಳಿತದ ಜೊತೆಗೆ ಸಹಕರಿಸಬೇಕಿದೆ.
Comments are closed.