ಕರ್ನಾಟಕ

ಇನ್ನೂ 6 ತಿಂಗಳು ಕೊರೋನಾ ನಿಯಂತ್ರಣ ಸೇವೆಗೆ ಸಿದ್ದರಾಗಲು ವೈದ್ಯರಿಗೆ ರಾಜ್ಯ ಸರ್ಕಾರ ಸೂಚನೆ

Pinterest LinkedIn Tumblr


ಬೆಂಗಳೂರು: ಮುಂದಿನ ಆರು ತಿಂಗಳುಗಳ ಕಾಲ ಕೊರೊನಾ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸೇವೆಗೆ ಸಿದ್ಧರಾಗಿ ಎಂದು ರಾಜ್ಯ ಸರ್ಕಾರ ವೈದ್ಯರಿಗೆ ಸೂಚನೆ ನೀಡಿದೆ. ಸೋಮವಾರ ಬೆಂಗಳೂರಿನಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಕಂದಾಯ ಸಚಿವ ಆರ್‌. ಅಶೋಕ್, ಮುಂದಿನ ಪರಿಸ್ಥಿತಿ ಎದುರಿಸಲು ವೈದ್ಯರು ಮಾನಸಿಕವಾಗಿ ಸಿದ್ಧರಾಗಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಮುಂದಿನ ಆರು ತಿಂಗಳುಗಳ ಕಾಲ ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿಯುತ್ತದೆ ಎಂಬ ಸೂಚನೆಯನ್ನು ಅಶೋಕ್ ನೀಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರ ಸ್ವರೂಪದಲ್ಲಿ ಏರಿಕೆಯಾಗುತ್ತಿದ್ದು ಸೋಂಕು ನಿಯಂತ್ರಣ ಮಾಡಲು ಸರ್ಕಾರ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈ ಕುರಿತಾಗಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದರು. ಕೊರೊನಾ ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದ ಕಾರಣಕ್ಕಾಗಿ ಇದುವರೆಗೂ 2,428 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇನ್ನು ಸೋಂಕಿತ ರೋಗಿಗಳಿಗೂ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ ಎಂದರು.

ಸೋಂಕಿತರು ಮೃತಪಟ್ಟರೆ ಅವರ ಮೃತದೇಹವನ್ನು ಸಾಗಿಸಲು ಪ್ರತಿ ಝೋನ್‌ಗೆ ಎರಡು ಚಿರಶಾಂತಿ ವಾಹನಗಳ ಸೌಲಭ್ಯವನ್ನು ಮಾಡಲಾಗಿದೆ. ವಾಹನ ಚಾಲಕ ಸೇರಿದಂತೆ ನಾಲ್ವರು ಸಿಬ್ಬಂದಿ ಅದರಲ್ಲಿ ಇರುತ್ತಾರೆ. ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಕಂದಾಯ ಇಲಾಖೆಗೆ 742 ಕೋಟಿ ಅನುದಾನ ಬಂದಿದೆ. ಈ ಪೈಕಿ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ 232 ಕೋಟಿ, ಆರೋಗ್ಯ ಇಲಾಖೆಗೆ 70 ಕೋಟಿ, ಬಿಬಿಎಂಪಿಗೆ 50, ಪೊಲೀಸ್ ಇಲಾಖೆಗೆ 12 ಕೋಟಿ, ರೈಲ್ವೆ ಇಲಾಖೆಗೆ 13 ಹಾಗೂ ಬಿಎಂಟಿಸಿಗೆ 2.89 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು. ಕಂದಾಯ ಇಲಾಖೆಯಿಂದ ಒಟ್ಟು 380 ಕೋಟಿ ಬಿಡುಗಡೆ ಮಾಡಲಾಗಿದ್ದು, ಇನ್ನು 362 ಕೋಟಿ ಇಲಾಖೆಯಲ್ಲಿ ಲಭ್ಯವಿದೆ. ಇದನ್ನು ಕೋವಿಡ್‌ಗಾಗಿ ಬಳಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಹೆಚ್ಚಿಸುವ ನಿಟ್ಟಿನಲ್ಲಿ ರವಿಶಂಕರ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಲಾಗುವುದು ಎಂದು ತಿಳಿಸಿದ ಸಚಿವರು ಈಗಾಗಲೇ ಆಶ್ರಮದಲ್ಲಿ 176 ಬೆಡ್‌ಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು ಹೆಚ್ಚು ಬೆಡ್‌ಗಳು ಸಿಗುವ ರೀತಿ ಮಾತುಕತೆ ನಡೆಸಲಾಗುವುದು ಎಂದರು. ಹಜ್ ಭವನದಲ್ಲಿ 432 ಬೆಡ್‌ ಹಾಗೂ ಕೃಷಿ ವಿಶ್ವ ವಿದ್ಯಾಲಯದ 1,000 ಬೆಡ್, ಕೋರಮಂಗಳದ ಮೈದಾನದಲ್ಲಿ 270 ಬೆಡ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Comments are closed.