ಕರ್ನಾಟಕ

ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತೆ ಕೊರೋನಾ ರಣಕೇಕೆ: ಸಮುದಾಯಕ್ಕೆ ಹರಡುವ ಭೀತಿಯಲ್ಲಿ ಜನತೆ

Pinterest LinkedIn Tumblr


ಚಿತ್ರದುರ್ಗ(ಜೂ.28): ದೇಶವನ್ನೇ ತಲ್ಲಣಿಸುವಂತೆ ಮಾಡಿರುವ ಮಹಾಮಾರಿ ಕೊರೋನಾ ವೈರಸ್ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತೆ ರಣಕೇಕೆ ಹಾಕುತ್ತಲಿದೆ. ಅನಾರೋಗ್ಯದಿಂದ ಬಳಲುತ್ತಿದ್ದವರು ಆರೋಗ್ಯದ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಹೋಗಿ ಬಂದಿದ್ದ ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ವೇದಾವತಿ ಬಡಾವಣೆ, ಅಜಾದ್ ನಗರದಲ್ಲಿ ತಲಾ ಇಬ್ಬರು ಸೇರಿಂದತೆ ಒಟ್ಟು ನಾಲ್ಕು ಜನರಿಗೆ ಕೊರೋನಾ ಸೋಂಕು ದೃಢವಾಗಿತ್ತು.

ಇವರಿಗೆ ಕೊರೋನಾ ಸೋಂಕು ದೃಢವಾಗುತ್ತಿದ್ದಂತೆ ಆರೋಗ್ಯ ಇಲಾಖೆ ಇವರನ್ನ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡುವ ಕೆಲಸವನ್ನ ಮಾಡಿತ್ತು. ಆದರೆ ಇವರಲ್ಲಿ ಓರ್ವ 65 ವರ್ಷದ ವೃದ್ದ ಕಿರಾಣಿ ಅಂಗಡಿ ನಡೆಸುತ್ತಿದ್ದು ಅವರಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಆರು ಜನರಿಗೆ ಇಂದು ಪಾಸಿಟಿವ್​​ ಬಂದಿದ್ದು ಚಿತ್ರದುರ್ಗ ಜಿಲ್ಲೆ ಜನರನ್ನು ಆತಂಕಕ್ಕೆ ದೂಡಿದೆ.

ಗ್ರೀನ್ ಝೋನಲ್ಲಿದ್ದ ಚಿತ್ರದುರ್ಗ ಜಿಲ್ಲೆಯಲ್ಲೀಗ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪ್ರಾರಂಭದ ದಿನಗಳಲ್ಲಿ ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದಿದ್ದ ಒಟ್ಟು 43 ಜನರಲ್ಲಿ ಕಾಣಿಕೊಂಡಿದ್ದ ಕೊರೋನಾ ಸತತ ಚಿಕಿತ್ಸೆ ನೀಡಿದ ಬಳಿಕ, ಕೊರೋನಾ ಸೋಂಕಿತ 43 ಜನರೂ ಕೂಡಾ ಗುಣ ಮುಖರಾಗಿ ಬಿಡುಗಡೆ ಹೊಂದಿದ್ದರು.

ಆದರೆ ಜಿಲ್ಲೆಯಲ್ಲಿ ಸದ್ಯದ ವಾತವರಣ ಬದಲಾಗಿದ್ದು, ದಿನಕ್ಕೆ ಎರಡರಂತೆ ಮೂರು ದಿನಗಳಲ್ಲಿ 07 ಕೊರೋನಾ ಸೋಂಕಿತರು ಪತ್ತೆಯಾಗಿದ್ದರು. ಈ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಆರು ಜನರು ಸೇರಿ ಜಿಲ್ಲೆಯಲ್ಲಿ ಇಂದು 07 ಜನರಿಗೆ ಕೊರೋನಾ ಪಾಸಿಟಿವ್​ ದೃಢವಾಗಿದೆ. ಅವರಲ್ಲಿ‌ ಹಿರಿಯೂರು ನಗರದ 58 ವರ್ಷದ ಮಹಿಳೆ, 28 ವರ್ಷದ ಯುವಕ, 21ವರ್ಷದ ಯುವಕ, 19 ವರ್ಷದ ಯುವಕ, 96 ವರ್ಷದ ವೃದ್ದೆಗೆ ಸೋಂಕು ದೃಢಪಟ್ಟಿದೆ.

ಇನ್ನೂ ಇದೇ ಹಿರಿಯೂರಿನಲ್ಲಿ 38 ವರ್ಷದ ಪುರುಷ ಸೇರಿ 7 ಜನರಿಗೆ ಪಾಸಿಟಿವ್‌ ದೃಢವಾಗಿದೆ. ಈ ಏಳು ಪ್ರಕರಣಗಳು ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಬರಲಿವೆ. ಆದರೆ ಹಿರಿಯೂರಿನಲ್ಲಿ ಒಂದೇ ಬಾರಿ ಇಷ್ಟು ಸೋಂಕಿತರು ಪತ್ತೆಯಾಗಲು ಕಾರಣ ಮೊನ್ನೆ ಹಿರಿಯೂರು ನಗರದ 65 ವರ್ಷದ ಕಿರಾಣಿ ಅಂಗಡಿ ಮಾಲೀಕನಿಗೆ ಕೊರೋನಾ ಪಾಸಿಟಿವ್ ಬಂದಿದ್ದು. ಇವರು ಹಿರಿಯೂರಿನಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದು ಕಳೆದ ವಾರ ಅನಾರೋಗ್ಯದ ಕಾರಣಕ್ಕೆ ಚಿಕಿತ್ಸೆ ಪಡೆಯೋಕೆ ಬೆಂಗಳೂರಿಗೆ ಹೋಗಿ ಬಂದಿದ್ದರು. ಇವರಿಗೆ ಮೊನ್ನೆಯಷ್ಟೆ ಕೊರೋನಾ ಸೋಂಕು ದೃಢವಾಗಿದ್ದು, ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 06 ಜನರಿಗೆ ಇಂದು ಪಾಸಿಟಿವ್ ಕಾಣಿಸಿಕೊಂಡಿದೆ.

ರಾಷ್ಟ್ರೀಯ ಹೆದ್ದಾರಿ ನಾಲ್ಕರ ಗುಯಿಲಾಳು ಟೋಲ್ ನಲ್ಲಿ ಕೆಲಸ ಮಾಡಲು ಬಂದಿದ್ದ ಮಹಾರಾಷ್ಟ್ರ ಮೂಲದ 38 ವರ್ಷದ ವ್ಯಕ್ತಿಗೂ ಕೊರೋನಾ ಪಾಸಿಟಿವ್​​ ದೃಢಪಟ್ಟಿದೆ. ಇದೆಲ್ಲದರ ನಡುವೆ ಬೆಂಗಳೂರಿಗೆ ಹೋಗಿ ಬಂದಿದ್ದ 65ವರ್ಷದ ವೃದ್ದನಿಂದ 6 ಜನರಿಗೆ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ನೆಮ್ಮದಿಯಿಂದ ಇದ್ದ ಸಮುದಾಯಕ್ಕೆ ಈ ಮಹಾಮಾರಿ ಕೊರೋನಾ ಹರಡಲು ಪ್ರಾರಂಭಿಸಿದೆ.ಅಷ್ಟೇ ಅಲ್ಲದೇ ನಿನ್ನೆ ಚಳ್ಳೆಕೆರೆ ನಗರ ನಿವಾಸಿಯಾಗಿರುವ 26 ವರ್ಷದ ಯುವಕ ಬೆಂಗಳೂರಿನ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಅವನಿಗೂ ಕೊರೋನಾ ಬಂದಿದೆ. ಇನ್ನೂ ಹೊಳಲ್ಕೆರೆ ಪಟ್ಟಣದ 25 ವರ್ಷದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಿ ಬಂದಿದ್ದ. ಹೀಗೆ ಬೆಂಗಳೂರಿಗೆ ಹೋಗಿ ಬಂದಿರುವ ಯುವಕನಿಗೂ ಕೊರೋನಾ ಪಾಸಿಟಿವ್‌ ದೃಢವಾಗಿದೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಇದೀಗ ಮಹಾ ಮಾರಿ ಕೊರೋನಾ ಸೋಂಕಿತರ ಸಂಖ್ಯೆ ಒಟ್ಟು 57ಕ್ಕೆ ಏರಿಕೆ ಆಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಸೋಂಕಿನಿಂದ 43 ಜನರು ಗುಣಮುಖ ಆಗಿದ್ದು ಬಿಡುಗಡೆ ಹೊಂದಿದ್ದಾರೆ. ಉಳಿದಂತೆ ಜಿಲ್ಲೆಯಲ್ಲಿ ಒಟ್ಟು 14 ಕೊರೊನಾ ಆಕ್ಟೀವ್ ಪ್ರಕರಣಗಳು ಕಂಡು ಬಂದಿದ್ದು, ಚಿತ್ರದುರ್ಗ ಕೋವಿಡ್ 19 ಆಸ್ಪತ್ರೆಯಲ್ಲಿ 09 ಜನರಿಗೆ ಹಿರಿಯೂರಿನ ಧರ್ಮಪುರ ಕೋವಿಡ್ ಕೇರೆ ಸೆಂಟರ್ನಲ್ಲಿ 05 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಚಿತ್ರದುರ್ಗ ಜಿಲ್ಲೆಯ ಜನರಿಗೆ ಈ ಮಹಾಮಾರಿ ರೋಗ ಸದ್ದಿಲ್ಲದೇ ಹರಡುತ್ತಿರುವುದನ್ನ ಕಂಡ ಜನರಿಗೆ ಇದೊಂದು ದೊಡ್ಡ ಆಘಾತವನ್ನ ಉಂಟು ಮಾಡಿದೆ.

ಈಗ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ವೇದಾವತಿ ಬಡಾವಣೆ,ಆಝಾದ್ ನಗರ, ಹೊಳಲ್ಕೆರೆ ಪಟ್ಟಣದ ಸಿದ್ದರಾಮಪ್ಪ ಬಡಾವಣೆ, ಚಳ್ಳಕೆರೆ ನಗರದ ದತ್ತ ಮಂದಿರ ರಸ್ತೆಗೆ ಬ್ಯಾರೀಕೇಡ್ ಹಾಕಿ ಸೀಲ್ ಡೌನ್ ಮಾಡಲಾಗಿದೆ. ಇಷ್ಟು ದಿನ ಬೇರೆ ರಾಜ್ಯದಿಂದ ಜಿಲ್ಲೆಗೆ ಬಂದವರಿಗೆ ತಗುಲಿದ್ದ ಸೋಂಕು , ಈಗ ಬೆಂಗಳೂರು ನಗರಕ್ಕೆ ಹೋಗಿ ಬಂದ ಜನರಿಗೆ ತಗುಲಿದೆ. ಇದರಿಂದ ಎಲ್ಲಿಯೂ ಹೋಗದೆ ಜಾಗರೂಕರಾಗಿ ಜಿಲ್ಲೆಯಲ್ಲಿಯೇ ಇದ್ದ ಜನರಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕಾರಣಕ್ಕೆ ಕೊರೋನ ಸೋಂಕು ಅಂಟಿಕೊಂಡಿದೆ. ಇದರಿಂದ ಒಬ್ಬರಿಂದ ಒಬ್ಬರಿಗೆ ಸಾಮುದಾಯಿಕವಾಗಿ ಈ ಮಾರಕ ರೋಗ ಎಲ್ಲಿ ಹರಡಿ ಜಿಲ್ಲೆಯ ಜನರ ಜೀವ ಹಿಂಡುತ್ತದೋ ಎಂಬ ಚಿಂತೆ ಶುರುವಾಗಿದೆ.

Comments are closed.