ಕರ್ನಾಟಕ

ರಾಜ್ಯದಲ್ಲಿ ಇಂದು (ಗುರುವಾರ) 442 ಕೊರೋನಾ ಪ್ರಕರಣಗಳು ಪತ್ತೆ: 6 ಸಾವು

Pinterest LinkedIn Tumblr


ಬೆಂಗಳೂರು(ಜೂನ್ 25): ರಾಜ್ಯ ರಾಜಧಾನಿ ಇನ್ನೂ ಅಪಾಯಕಾರಿ ಹಂತಕ್ಕೆ ಹೋಗಿಲ್ಲ ಎಂದು ಸರ್ಕಾರ, ಸಚಿವರು ಹೇಳುತ್ತಾ ಬರುತ್ತಿರುವಂತೆಯೇ ನಗರದಲ್ಲಿ ಕೊರೋನಾ ಕೇಕೆ ಹಾಕುತ್ತಿದೆ. ಇವತ್ತೂ ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ರಾಜ್ಯಾದ್ಯಂತ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 442 ಮಂದಿಗೆ ಸೋಂಕು ಇರುವುದು ಖಚಿತಪಟ್ಟಿದೆ. ಈ ವೇಳೆ 6 ಮಂದಿ ಅಸುನೀಗಿದ್ಧಾರೆ. ಈವರೆಗೆ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 170ಕ್ಕೆ ಏರಿದೆ.

ಹೊಸ 442 ಪ್ರಕರಣಗಳ ಸೇರ್ಪಡೆಯೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 3,716 ಇವೆ. ಈವರೆಗೆ ದಾಖಲಾಗಿರುವ ಕೊರೋನಾ ಪ್ರಕರಣಗಳ ಸಂಖ್ಯೆ 10,560 ಮುಟ್ಟಿದೆ.

ಇವತ್ತು ಸಮಾಧಾನದ ಸಂಗತಿ ಎಂದರೆ ಹೊಸ ಸೋಂಕು ಪತ್ತೆಯಾದವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಡಿಸ್​ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆ ಅವಧಿಯಲ್ಲಿ 519 ಮಂದಿ ಗುಣಮುಖಗೊಂಡು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಯಾದಗಿರಿಯಲ್ಲಿ 118 ಮಂದಿ ಡಿಸ್​ಚಾರ್ಜ್ ಆಗಿದ್ಧಾರೆ. ಮಂಗಳೂರಿನಲ್ಲೂ ಬಿಡುಗಡೆಯಾದವರ ಸಂಖ್ಯೆ ಶತಕದ ಸಮೀಪ ಇದೆ. ಆದರೆ, ಕೊರೋನಾ ಪ್ರಕರಣ ಹೆಚ್ಚಾಗಿರುವ ಬೆಂಗಳೂರಿನಲ್ಲಿ ಕೇವಲ 30 ಮಂದಿ ಮಾತ್ರ ಡಿಸ್​ಚಾರ್ಜ್ ಆಗಿದ್ಧಾರೆ.

ಮತ್ತೊಂದು ಆತಂಕದ ಸಂಗತಿ ಎಂದರೆ, ಐಸಿಯುನಲ್ಲಿರುವವರ ಸಂಖ್ಯೆಯೂ ಹೆಚ್ಚಾಗತ್ತಿದೆ. 160 ಜನರು ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾರೆ. ಇವತ್ತು ರಾಜ್ಯಾದ್ಯಂತ ಸಂಭವಿಸಿದ 6 ಸಾವು ಪ್ರಕರಣಗಳಲ್ಲಿ ಬೆಂಗಳೂರಿನಲ್ಲೇ ಮೂವರು ಸತ್ತಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 78ಕ್ಕೆ ಏರಿದೆ.

Comments are closed.