ಕರ್ನಾಟಕ

ರಾಜ್ಯದಲ್ಲಿ ಮತ್ತೆ ಲಾಕ್‌ ಡೌನ್ ಬಗ್ಗೆ ಸರ್ಕಾರ ಚಿಂತನೆ ನಡೆಸಿರುವ ಸೂಚನೆ ನೀಡಿದ ಸಚಿವ ಶ್ರೀರಾಮುಲು

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್‌ ಡೌನ್ ಬಗ್ಗೆ ಸರ್ಕಾರ ಚಿಂತನೆ ನಡೆಸಿರುವ ಸೂಚನೆಯನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ನೀಡಿದ್ದಾರೆ.

ನಗರದಲ್ಲಿಂದು ಕೆ.ಸಿ.ಜನರಲ್ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಈಗಾಗಲೇ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿವೆ. ಈ‌ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು ವೈದ್ಯರು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನೊಮ್ಮೆ ಲಾಕ್ ಡೌನ್ ಮಾಡುವ ಬಗ್ಗೆಯೂ ಚರ್ಚೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪ್ರತಿ ಜಿಲ್ಲೆಗೂ ಲ್ಯಾಬ್ ಸ್ಥಾಪಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಬೆಂಗಳೂರಿನಲ್ಲಿ ಕೋವಿಡ್‌ ರೋಗಿಗಳಿಗಾಗಿ 1330 ಹಾಸಿಗೆಯ ಸೌಲಭ್ಯವಿದೆ. ಹಿರಿಯ ನಾಗರೀಕರಿಗೆ ಹೆಚ್ಚಿನ ಪರೀಕ್ಷೆ ಮಾಡಲಾಗುವುದು‌. ಕೊರೊನಾ ಪರೀಕ್ಷಾ ಸಂಖ್ಯೆಗಳು ಹೆಚ್ಚಾಗುತ್ತಿರುವುದರಿಂದ ಲ್ಯಾಬ್‌ಗಳ ಸಂಖ್ಯೆಯನ್ನೂ ಸಹ ಹೆಚ್ಚಿಸಬೇಕಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗಾಗಿ ದರ ನಿಗದಿಪಡಿಸಲಾಗಿದೆ‌. ಸರ್ಕಾರಿ ಆಸ್ಪತ್ರೆಗಳಿಗೆ ಮೊದಲ ಆದ್ಯತೆ. ರೋಗಿಗಳು ಇಂತಹ ಖಾಸಗಿ ಆಸ್ಪತ್ರೆಗೆ ಹೋಗಬೇಕು. ಆದ್ಯತೆ ನೀಡಿ ಎಂದು ಮನವಿ ಮಾಡಿದರೆ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಶಿಫಾರಸು ಮಾಡಲಾಗುವುದು. ‘ಎ’ ಲಕ್ಷಣ ಇರುವ ಪ್ರಕರಣಗಳೇ ಹೆಚ್ಚಾಗಿದ್ದು, ಇವರನ್ನು ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಲಾಗುವುದು‌. ಕೊರೋನಾ ದೃಢಪಟ್ಟವರನ್ನು ಸರ್ಕಾರ ನಿಗಾವಹಿಸಲಿದೆ. ಹಜ್ ಭವನ ಐಸಿಯು ಕೇರ್ ಸೆಂಟರ್ ಆಗಿ ಸಿದ್ಧಗೊಂಡಿದ್ದು “ಎ” ಲಕ್ಷಣ ಇರುವ ಸೋಂಕಿತರನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗುವುದು ಎಂದರು‌.

ಕೋವಿಡ್ ಆಸ್ಪತ್ರೆಯ ಕಳಪೆ ಗುಣಮಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಲ್ಲಿ ಈ ರೀತಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಿನ್ನೆ ಮೊನ್ನೆ ಸಮಸ್ಯೆಯಾಗಿತ್ತು. ಅದನ್ನು ಸರಿಪಡಿಸುವ ಕೆಲಸ‌ ಮಾಡಲಾಗುವುದು ಎಂದರು.

ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು. ಮುಖ್ಯಮಂತ್ರಿಗಳು ಈ ಬಗ್ಗೆ ಬಹಳ ಗಂಭೀರವಾಗಿದ್ದಾರೆ. ಎಲ್ಲ ಸರಿಪಡಿಸರಿಪಡಿಸುತ್ತೇವೆ ಎಂದು ಶ್ರೀರಾಮುಲು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇನ್ನು ಕೇಂದ್ರ ಸರ್ಕಾರದ ನಿರ್ದೇಶನ ಇಲ್ಲದೆ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡುವುದಿಲ್ಲ. ಬೆಂಗಳೂರಿನಲ್ಲಿ ಸೀಲ್‌ ಡೌನ್‌ ವಾರ್ಡ್ ಮಾಡಬೇಕೇ? ವಿಧಾನಸಭಾ ಕ್ಷೇತ್ರವಾರು ಸೀಲ್ ಡೌನ್ ಮಾಡಬೇಕೇ? ಎಂಬ ಬಗ್ಗೆ ತಜ್ಞರ ಜೊತೆ ಚರ್ಚಿಸಿ ಅವರ ವರದಿ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಇದು ತುಘಲಕ್ ಸರ್ಕಾರ ಅಲ್ಲ. ಕೇಂದ್ರ ಸರ್ಕಾರ ರಾಜ್ಯವನ್ನು ನಿಮಿಷ ನಿಮಿಷಕ್ಕೂ ಗಮನಿಸುತ್ತಲೇ ಇರುತ್ತದೆ. ತಜ್ಞರ ಸಮಿತಿಯ ವರದಿ ಆಧಾರದ ಮೇಲೆ ಸರ್ಕಾರ ಕ್ರಮಕೈಗೊಳ್ಳುತ್ತದೆ ಎಂದರು.

ಈ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ. ಏರಿಯಾ ಬಂಚ್ ಲಾಕ್‌ ಡೌನ್ ವಿಚಾರವಾಗಿಯೂ ಚರ್ಚೆ ಮಾಡುತ್ತೇವೆ ಎಂದರು.

ರೋಗಿಯನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಬೆಡ್ ಇಲ್ಲ ಎಂಬ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ಬೆಡ್ ಇಲ್ಲ ಎಂದು ಹೇಳುವ ಸಮಸ್ಯೆ ಬರಬಾರದು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಇಲ್ಲದಿರುವ ಬಗ್ಗೆ ಪರಿಶೀಲನೆ ನಡೆಸಿದ್ದೇನೆ ಎಂದರು.

ಬೆಂಗಳೂರಲ್ಲಿ ಎರಡು ಸಾವಿರ ಬೆಡ್ ಇವೆ. ಸರ್ಕಾರದಿಂದ ರೆಫರ್ ಆಗಿ ಹೋಗುವ ರೋಗಿಗಳಿಗೆ ಚಿಕಿತ್ಸೆ ಕೊಡಬೇಕು. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡುತ್ತೇವೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ನಿಗದಿತ ದರದೊಂದಿಗೆ ಚಿಕಿತ್ಸೆ ನೀಡುವ ಬಗ್ಗೆ ಈಗಾಗಲೇ ಆದೇಶ ಹೊರಡಿಸಿದ್ದೇವೆ ಎಂದರು.

Comments are closed.