ಕರ್ನಾಟಕ

ಅಕ್ರಮ ಸಂಬಂಧದ ಬಿರುಕಿನಿಂದ ವಾಟ್ಸಪ್ ಮಾಡಿ ಗೃಹಿಣಿ ಆತ್ಮಹತ್ಯೆ

Pinterest LinkedIn Tumblr


ಮೈಸೂರು: ಮದುವೆಯಾಗಿ ಗಂಡನಿಂದ ದೂರ ಇದ್ದು, ಪ್ರಿಯಕರನ ಜೊತೆ ಇದ್ದ ಮಹಿಳೆ ಇದೀಗ ಅದೇ ಪ್ರಿಯಕರನ ವಿಷಯವಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಇದು ಉಂಡೂ ಹೋದ, ಕೊಂಡೂ ಹೋದ ಎನ್ನುವ ಕಥೆ. ಗಂಡನಿಂದ ದೂರವಾದ ಮಹಿಳೆಯ ಸ್ನೇಹ ಸಂಪಾದಿಸಿದ ಭೂಪ, ಅಕ್ರಮ ಸಂಬಂಧ ಬೆಳೆಸಿದ. ಆಕೆಯಿಂದ ಲಕ್ಷಾಂತರ ಹಣವನ್ನೂ ಪೀಕಿದ್ದ. ಇದೀಗ ಆಕೆಯ ಸಾವಿಗೂ ಕಾರಣವಾಗಿ, ಜೈಲು ಪಾಲಾಗಿದ್ದಾನೆ.

ಈಕೆಯ ಹೆಸರು ಶೀಲಾ. ತನ್ನೆತ್ತರಕ್ಕೆ ಬೆಳೆದ ಇಬ್ಬರು ಮಕ್ಕಳ ತಾಯಿ. ಗಂಡ ಬಿಟ್ಟು ವರ್ಷಗಳಾಗಿದ್ದವು. ಮಕ್ಕಳನ್ನು ತಡ ಮುಟ್ಟಿಸಬೇಕು, ಬಿಜಿನೆಸ್ ಮೂಲಕ ಹಣ ಗಳಿಸಬೇಕು, ಹೊಸ ಜೀವನ ಕಟ್ಟಿಕೊಳ್ಳಬೇಕು ಹೀಗೆ ಏನೇನೋ ಕನಸು ಕಟ್ಟಿಕೊಂಡವಳು. ಆದರೆ ನಡು ವಯಸ್ಸಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶೀಲಾ ಆತ್ಮಹತ್ಯೆಗೆ ಕಾರಣನಾದ ವೆಂಕಟೇಶ ಅಲಿಯಾಸ್ ವೆಂಕಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಶೀಲಾ ಗಂಡ ವರ್ಷಗಳ ಹಿಂದೆಯೇ ಮಡದಿ, ಮಕ್ಕಳನ್ನು ಬಿಟ್ಟು ದೂರಾಗಿದ್ದ. ತಾನೇ ದುಡಿದು ಎರಡು ಗಂಡು ಮಕ್ಕಳನ್ನು ಸಾಕುತ್ತಿದ್ದ ಶೀಲಾಳಿಗೆ, ವೆಂಕಟೇಶ ಪರಿಚಯವಾಗಿದ್ದ. ಪರಿಚಯ ಸ್ನೇಹವಾಯ್ತು, ಸ್ನೇಹ ಸಲುಗೆಯಾಯ್ತು. ಅಕ್ರಮ ಸಂಬಂಧವೂ ಬೆಳೆಯಿತು. ಈತ ವೃತ್ತಿಯಲ್ಲಿ ಎಲ್ಐಸಿ ಏಜೆಂಟ್ ಮತ್ತು ಪೀಠೋಪಕರಣಗಳ ವ್ಯಾಪಾರಿ. ಹೀಗಾಗಿ ಇಬ್ಬರೂ ಬಂಡವಾಳ ಹಾಕಿ ಫರ್ನೀಚರ್ ಅಂಗಡಿ ಶುರು ಮಾಡಿದ್ದರು. ಇದಕ್ಕಾಗಿ ಶೀಲಾ 10 ಲಕ್ಷ ರೂ.ವರೆಗೂ ಸಾಲವನ್ನೂ ಮಾಡಿದ್ದರು. ಅದೇನಾಯ್ತೋ ಏನೋ, ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ವೆಂಕಟೇಶನ ಕಿರುಕುಳದಿಂದಲೇ ಶೀಲಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಪೋಷಕರ ಆರೋಪವಾಗಿದೆ. ಈ ಸಂಬಂಧ ಶೀಲಾ ತಾಯಿ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ತನ್ನ ಮಗಳ ಸಾವಿಗೆ ವೆಂಕಟೇಶನೇ ಕಾರಣ ಎಂದು ಆರೋಪಿಸಿದ್ದಾರೆ.

ಸಾವಿಗೂ ಮುನ್ನ ಶೀಲಾ ಮಾಡಿರುವ ವಾಟ್ಸಪ್ ಮೆಸೇಜ್.
ಮೂರು ದಿನಗಳ ಹಿಂದೆ ತಡರಾತ್ರಿ ಮೈಸೂರಿನ ಟಿ.ಕೆ.ಲೇಔಟ್​ನಲ್ಲಿರುವ ಶೀಲಾ ಮನೆಗೆ ಬಂದ ವೆಂಕಟೇಶ ಏಕಾಏಕಿ ಜಗಳ ಮಾಡಿದ್ದಾನೆ. ಹಣಕಾಸಿನ ವಿಚಾರವಾಗಿ ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಆತನನ್ನು ಸುಮ್ಮನಾಗಿಸಿದ ಶೀಲಾ, ಮಕ್ಕಳನ್ನು ಅಜ್ಜಿ ಮನೆಗೆ ಕಳುಹಿಸಿದ್ದಾಳೆ. ಬಳಿಕ ಆತನೊಂದಿಗೆ ವಾಟ್ಸಪ್​ನಲ್ಲಿ ಚಾಟ್ ಮಾಡಿದ್ದಾಳೆ. ಆತ ಬೈಯುತ್ತಿದ್ದರೆ, ಈಕೆ ಇನ್ಯಾವತ್ತೂ ನಿನ್ನ ಮುಂದೆ ಬರಲ್ಲ, ಇದೇ ಕೊನೆ ಅಂತೆಲ್ಲ ಮೆಸೇಜ್ ಮಾಡಿದ್ದಾಳೆ. ಮಾತ್ರವಲ್ಲ, ವಿಷದ ಬಾಟಲಿಯ ಫೋಟೋ ತೆಗೆದು ಕಳುಹಿಸಿದ್ದಾಳೆ. ಅಲ್ಲದೆ ವಿಷವನ್ನು ಲೋಟಕ್ಕೆ ಹಾಕಿಕೊಂಡ ಫೋಟೋಗಳನ್ನು ಆತನಿಗೆ ಕಳುಹಿಸಿದ್ದಾಳೆ. ಸ್ವಲ್ಪ ಹೊತ್ತಿನ ನಂತರ ಅದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ವೆಂಕಟೇಶನ ಬಗ್ಗೆ ಮಾತನಾಡಿರುವ ಶೀಲಾ, ನೀನು ನನ್ನನ್ನು ಬೈದೆ ಅದಕ್ಕಾಗಿ ನಾನು ಸಾಯುತ್ತಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿ, ಆತ್ಮಹತ್ಯೆಗೆ ಶರಣಾಗಿದ್ದಾರೆ.

ವೆಂಕಟೇಶ್ ಕಿರುಕುಳದಿಂದಲೇ ಶೀಲಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವೆಂಕಟೇಶನನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.