ಕರ್ನಾಟಕ

ರಾಜ್ಯದಲ್ಲಿ ಇಂದು (ಗುರುವಾರ) 210 ಕೊರೋನಾ ಪ್ರಕರಣಗಳು ಪತ್ತೆ; 12 ಬಲಿ!

Pinterest LinkedIn Tumblr


ಬೆಂಗಳೂರು (ಜೂನ್‌ 18); ಲಾಕ್‌ಡೌನ್‌ ಸಡಿಲಿಕೆ ನಂತರ ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇಂದು ಒಂದೇ ದಿನ ಸುಮಾರು 210 ಹೊಸ ಸೋಂಕು ಪ್ರಕರಣಗಳು ರಾಜ್ಯದಾದ್ಯಂತ ದಾಖಲಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 7944ಕ್ಕೆ ಏರಿಕೆಯಾಗಿದ್ದು, ಪ್ರತಿದಿನ ರಾಜ್ಯದಲ್ಲಿ ಸರಾಸರಿಯಾಗಿ 200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಇದೀಗ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಇದಲ್ಲದೆ, ಮಾರಣಾಂತಿಕ ಸೋಂಕಿಗೆ 12 ಜನ ಬಲಿಯಾಗಿದ್ದು, ಬಲಿಯಾದವರ ಸಂಖ್ಯೆಯೂ 102ರ ಗಡಿ ದಾಟಿದೆ. ಇನ್ನೂ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಸುಮಾರು 73ಜನ ದಾಖಲಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಲ್ಲದೆ 179 ಜನ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಬಳ್ಳಾರಿಯಲ್ಲಿ 48, ಕಲಬುರಗಿಯಲ್ಲಿ 48, ದಕ್ಷಿಣ ಕನ್ನಡದಲ್ಲಿ 23, ರಾಮನಗರದಲ್ಲಿ 21, ಬೆಂಗಳೂರು ನಗರದಲ್ಲಿ 17, ಯಾದಗಿರಿಯಲ್ಲಿ 8, ಮಂಡ್ಯದಲ್ಲಿ 7, ಬೀದರ್ ನಲ್ಲಿ 6, ಗದಗದಲ್ಲಿ 5, ರಾಯಚೂರು, ಹಾಸನ, ಧಾರವಾಡದಲ್ಲಿ ತಲಾ 4, ದಾವಣಗೆರೆ, ಚಿಕ್ಕಮಗಳೂರಿನಲ್ಲಿ 3, ವಿಜಯಪುರ, ಉತ್ತರ ಕನ್ನಡ , ಮೈಸೂರಿನಲ್ಲಿ ತಲಾ 2, ಬಾಗಲಕೋಟೆ, ಕೊಪ್ಪಳ, ಶಿವಮೊಗ್ಗದಲ್ಲಿ ತಲಾ1 ಪ್ರಕರಣಗಳು ವರದಿಯಾಗಿವೆ.

ಲಾಕ್‌ಡೌನ್‌ ಸಡಿಲಿಕೆ ಆರಂಭವಾದ ನಂತರ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಊಹೆಗೂ ಮೀರಿ ಏರಿಕೆಯಾಗುತ್ತಲೇ ಇದೆ. ಸರಾಸರಿಯಾಗಿ ಪ್ರತಿದಿನ ಇನ್ನೂರಕ್ಕೂ ಹೆಚ್ಚು ಜನ ಈ ಸೋಂಕಿಗೆ ತುತ್ತಾಗುತ್ತಿದ್ದಾರೆ. ದೇಶದಾದ್ಯಂತ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹಿಂತಿರುಗುತ್ತಿರುವುದೇ ಈ ಸೋಂಕು ಅಧಿಕವಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

Comments are closed.