ಕರ್ನಾಟಕ

ರಾಜಧಾನಿಯಲ್ಲಿ ಕೊರೊನಾ ಅಟ್ಟಹಾಸ; ಇಬ್ಬರು ವೈದ್ಯ ವಿದ್ಯಾರ್ಥಿಗಳೂ ಸೇರಿದಂತೆ 36 ಮಂದಿಗೆ ಕೊರೋನಾ ಸೋಂಕು

Pinterest LinkedIn Tumblr

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ವೈರಾಣು ಸೋಂಕಿನ ಅಟ್ಟಹಾಸ ಮುಂದುವರಿದಿದ್ದು, ಶುಕ್ರವಾರ ಒಂದೇ ದಿನ ಇಬ್ಬರು ವೈದ್ಯ ವಿದ್ಯಾರ್ಥಿಗಳೂ ಸೇರಿದಂತೆ 36 ಮಂದಿಗೆ ಕೊರೋನಾ ಸೋಂಕು ತಗುಲಿದೆ.

ಅಂತೆಯೇ ಕೋವಿಡ್‌-19ಕ್ಕೆ ಇಂದು ಮೂವರು ಮಹಿಳೆಯರು ಸೇರಿ ಒಟ್ಟು ನಾಲ್ಕು ಮಂದಿ ಬಲಿಯಾಗಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ಕೊರೋನಾ ಸೋಂಕಿಗೆ ಒಟ್ಟು 27 ಮಂದಿ ಮೃತಪಟ್ಟಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಒಟ್ಟು 617 ಮಂದಿಗೆ ಸೋಂಕು ಬಂದಿದ್ದು, ಸದ್ಯ 290 ಸಕ್ರಿಯ ಪ್ರಕರಣಗಳಿದ್ದು, 299 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ 25 ವರ್ಷದ ವೈದ್ಯ ವಿದ್ಯಾರ್ಥಿನಿಗೆ ಸೋಂಕು ತಗಲಿದ್ದು, ಈಕೆ ಆಸ್ಪತ್ರೆಯ ಕ್ವಾರ್ಟರ್ಸ್‌ನಲ್ಲೇ ವಾಸವಿದ್ದಳು ಎನ್ನಲಾಗಿದೆ. ಹಾಗೆಯೇ, ಕೆಐಎಲ್‌ಗೆ ಬಂದಿಳಿಯುವ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸುವ ಕಾರ್ಯದಲ್ಲಿ ಸ್ವಯಂಪ್ರೇರಿತವಾಗಿ ತೊಡಗಿಸಿಕೊಂಡಿದ್ದ ಆಯುರ್ವೇದ ವಿದ್ಯಾರ್ಥಿನಿಗೆ ಸೋಂಕು ಇರುವುದು ದೃಢಪಟ್ಟಿದೆ. ಈಕೆ ರಾಜಾಜಿನಗರದ ಎಲ್‌ಎನ್‌ಪುರದಲ್ಲಿ ಪೋಷಕರೊಂದಿಗೆ ನೆಲೆಸಿದ್ದಳು ಎಂದು ತಿಳಿದುಬಂದಿದೆ.

ಇತ್ತ ಆನೇಕಲ್ 46 ವರ್ಷದ ಮಹಿಳೆಯೊಬ್ಬರು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಸಂಬಂಧ ಆಸ್ಪತ್ರೆ ತೆರಳಿದ್ದರು. ಈಗ 8 ಮಂದಿ ಪ್ರಾಥಮಿಕ ಸಂಪರ್ಕಿತ ವ್ಯಕ್ತಿಗಳ ಜೊತೆ 3 ಮಂದಿ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಅಂತೆಯೇ ಕೊಮ್ಮಘಟ್ಟದಲ್ಲಿ 56 ವರ್ಷದ ಮಹಿಳೆಗೆ ಸೊಂಕು ಬಂದಿದೆ. ಕೊಮ್ಮಘಟ್ಟದ ಬಿಡಿಎ ಅಪಾರ್ಟ್‍ಮೆಂಟ್ ನಲ್ಲಿದ್ದ ಮಹಿಳೆ ಡಯಾಲಿಸಿಸ್ ಸಂಬಂಧ ಆಸ್ಪತ್ರೆಗೆ ತೆರಳುತ್ತಿದ್ದರು. ಈಗ ಅವರಿಗೆ ಕೋವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಈಗ ಈಕೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ನಾಲ್ವರು ಮತ್ತು 8 ಮಂದಿ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.

ಒಂದೇ ಕುಟುಂಬದ 6 ಮಂದಿಗೆ ಸೋಂಕು
ಸಂಪಂಗಿರಾಮನಗರದಲ್ಲಿ ವಾಸವಿದ್ದ ಒಂದೇ ಕುಟುಂಬದ ಆರು ಮಂದಿಗೆ ಶುಕ್ರವಾರ ಸೋಂಕು ತಗಲಿರುವುದು ದೃಢಪಟ್ಟಿದೆ. ಇತ್ತೀಚೆಗೆ ವೃದ್ಧರೊಬ್ಬರಲ್ಲಿ (ರೋಗಿ 4851) ಸೋಂಕು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬ ಸದಸ್ಯರೆಲ್ಲರನ್ನೂ ಅವರ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಐದು ದಿನದ ಬಳಿಕ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದಾಗ ಆರು ಮಂದಿಯ ವರದಿಯು ಪಾಸಿಟಿವ್‌ ಬಂದಿದೆ.

ಲಾಲ್‌ಬಾಗ್‌ನಲ್ಲಿ ವಾಯುವಿಹಾರ ಮಾಡುತ್ತಿದ್ದವರಿಗೆ ಸೋಂಕು!
ಲಕ್ಕಸಂದ್ರದ ಲಾಲ್‌ಜೀ ನಗರದಲ್ಲಿ ನೆಲೆಸಿದ್ದ 51 ವರ್ಷದ ಉದ್ಯಮಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರು ಮನೆ ಸಮೀಪವೇ ಇರುವ ಲಾಲ್‌ಬಾಗ್‌ನಲ್ಲಿ ನಿತ್ಯ ಸ್ನೇಹಿತರೊಂದಿಗೆ ವಾಯುವಿಹಾರ ಮಾಡುತ್ತಿದ್ದರು. ಜ್ವರದಿಂದ ಬಳಲುತ್ತಿದ್ದ ಇವರು ಪತ್ನಿಯೊಂದಿಗೆ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡಾಗ ಸೋಂಕು ಇರುವುದು ದೃಢಪಟ್ಟಿದೆ. ಪತ್ನಿಯ ವರದಿಯು ನೆಗೆಟಿವ್‌ ಬಂದಿದೆ. ಸೋಂಕಿತ ವ್ಯಕ್ತಿಯು ಲಾಲ್‌ಬಾಗ್‌ನಲ್ಲಿಓಡಾಡಿದ್ದರಿಂದ ವಾಯುವಿಹಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ.

Comments are closed.