ಕರ್ನಾಟಕ

ಕಾರ್ಮಿಕರ ಕೆಲಸ ಅವಧಿ ಹೆಚ್ಚಳ ಒಪ್ಪಲಾಗದು – ಹೈಕೋರ್ಟ್‌

Pinterest LinkedIn Tumblr


ಬೆಂಗಳೂರು: ಕೊರೊನಾ ಸಂದರ್ಭವನ್ನು ‘ಸಾರ್ವಜನಿಕ ತುರ್ತು ಪರಿಸ್ಥಿತಿ’ಯಾಗಿ ಪರಿಗಣಿಸಿ ಕೈಗಾರಿಕೆಗಳ ಕಾಯಿದೆಯ ಸೆಕ್ಷನ್‌ 5 ರ ಅನ್ವಯ ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ ಮಾಡಿರುವುದನ್ನು ಒಪ್ಪಲಾಗದು ಎಂದು ಹೈಕೋರ್ಟ್‌ ಹೇಳಿದೆ.

ಅಲ್ಲದೆ, ಒಂದು ವೇಳೆ ಸರಕಾರ ಹೊಸದಾಗಿ ನಿರ್ಧಾರ ಕೈಗೊಳ್ಳದಿದ್ದರೆ ಕೆಲಸದ ಅವಧಿ ಹೆಚ್ಚಿಸಿದ ಅಧಿಸೂಚನೆಗೆ ತಡೆ ನೀಡಬೇಕಾಗುತ್ತದೆ ಎಂದು ಹೈಕೋರ್ಟ್‌ ಎಚ್ಚರಿಸಿದೆ
.
ಬೆಂಗಳೂರಿನ ದೀಪಾಂಜಲಿ ನಗರದ ಎಚ್‌. ಮಾರುತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಕೈಗಾರಿಕೆಗಳ ಕಾಯಿದೆ ಸೆಕ್ಷನ್‌ 5 ಉಲ್ಲೇಖಿಸಿ ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿಯನ್ನು ಸರಕಾರ ಹೆಚ್ಚಿಸಿದೆ. ಸೆಕ್ಷನ್‌ 5ರ ಪ್ರಕಾರ ದೇಶದ ಭದ್ರತೆಗೆ ತೊಂದರೆಯಾದಾಗ ಅಂದರೆ ಹೊರಗಿನ ಆಕ್ರಮಣ ಮತ್ತು ಆಂತರಿಕ ತೊಂದರೆಗಳಿದ್ದಾಗ ಇಂತಹ ತೀರ್ಮಾನ ಕೈಗೊಳ್ಳಲು ಅವಕಾಶವಿದೆ. ಆದರೆ ಲಾಕ್‌ಡೌನ್‌ ಪರಿಸ್ಥಿತಿಯಲ್ಲಿ ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಿ ಹೊರಡಿಸಿರುವ ಅಧಿಸೂಚನೆ ಸಮ್ಮತಿಸಲಾಗದು ಎಂದು ಮೌಖಿಕವಾಗಿ ಹೇಳಿತು.

ಸರಕಾರಿ ವಕೀಲರು, ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಲು ಅವಕಾಶವಿರುವುದಕ್ಕೆ ತಪ್ಪಾಗಿ ಸೆಕ್ಷನ್‌ 5 ಉಲ್ಲೇಖಿಸಲಾಗಿದೆ. ಆದರೆ, ಸೆಕ್ಷನ್‌ 65(2) ಅಡಿಯಲ್ಲಿ ಇಂತಹ ತೀರ್ಮಾನ ಕೈಗೊಂಡು ಅಧಿಸೂಚನೆ ಹೊರಡಿಸಲು ಸಾಧ್ಯವಿದೆ. ಅದರಂತೆ ಸೆಕ್ಷನ್‌ 5ರ ಅಡಿಯಲ್ಲಿ ಹೊರಡಿಸುವ ಅಧಿಸೂಚನೆಯನ್ನು ಹಿಂಪಡೆದು ಸೆಕ್ಷನ್‌ 65(2) ಅಡಿಯಲ್ಲಿ ಹೊಸ ಅಧಿಸೂಚನೆ ಹೊರಡಿಸಲು ಕಾಲಾವಕಾಶ ನೀಡಬೇಕೆಂದು ಕೋರಿದರು.

ಅದಕ್ಕೆ ನ್ಯಾಯಪೀಠ, ಸೆಕ್ಷನ್‌ 5ರ ಉಲ್ಲೇಖಿಸಿ ಅಧಿಸೂಚನೆ ಹೊರಡಿಸಿರುವ ಬಗ್ಗೆ ಶುಕ್ರವಾರದೊಳಗೆ ರಾಜ್ಯ ಸರಕಾರ ಹೊಸದಾಗಿ ತೀರ್ಮಾನ ತೆಗೆದುಕೊಳ್ಳದೇ ಹೋದರೆ ಸದ್ಯ ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿದೆ.

Comments are closed.