ಕರ್ನಾಟಕ

ತೆಲಂಗಾಣ, ತಮಿಳುನಾಡಲ್ಲಿ SSLC ಪರೀಕ್ಷೆ ರದ್ದು ! ಈ ಬಗ್ಗೆ ಶಿಕ್ಷಣ ಸಚಿವರಾದ ಎಸ್‌. ಸುರೇಶ್‌ ಕುಮಾರ್‌ ಹೇಳಿದ್ದೇನು..?

Pinterest LinkedIn Tumblr

ಚೆನ್ನೈ: ದಿನದಿಂದ ದಿನಕ್ಕೆ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ನೆನ್ನೆಯಷ್ಟೇ ತೆಲಂಗಾಣ ರಾಜ್ಯ ಸರ್ಕಾರ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ತಮಿಳುನಾಡು ಸಹ ಇದೇ ತೀರ್ಮಾನ ತೆಗೆದುಕೊಂಡಿದೆ.

ಹೀಗಾಗಿ ರಾಜ್ಯದಲ್ಲಿ 10ನೇ ತರಗತಿ ಪರೀಕ್ಷೆ ನಡೆಯುತ್ತದೆಯೇ? ರದ್ದಾಗುತ್ತದೆಯೇ? ಎಂಬ ಪ್ರಶ್ನೆ ಎದುರಾಗಿತ್ತು.

10 ಮತ್ತು 11ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಿ ತಮಿಳುನಾಡು ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಈ ಪ್ರಶ್ನೆಗೆ ಖುದ್ದು ಶಿಕ್ಷಣ ಸಚಿವರಾದ ಎಸ್‌. ಸುರೇಶ್‌ ಕುಮಾರ್‌ ಅವರು ಉತ್ತರಿಸಿದ್ದು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದು ಮಾಡಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಪರೀಕ್ಷೆ ದಿನಾಂಕ ನಿಗದಿಯಾಗಿದ್ದು, ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಯಲಿದೆ. ನಿರ್ಧಾರ ಬದಲಾಯಿಸುವ ಮಾತೇ ಇಲ್ಲ. ಜೂನ್‌ 25ರಿಂದ ಜುಲೈ 4ರವರೆಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ದತೆ ನಡೆಸಿಕೊಳ್ಳಿ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಉಡುಪಿಯಲ್ಲಿ ಹೇಳಿಕೆ ನೀಡಿದ್ದಾರೆ.

ತೆಲಂಗಾಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದು:
ಕೊರೊನಾ ವೈರಸ್ ತೆಲಂಗಾಣದಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ. ರಾಜ್ಯ ಸರಕಾರ 10ನೇ ಎಸ್‌ಎಸ್ಸಿ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ವಿದ್ಯಾರ್ಥಿಗಳನ್ನು ಇಂಟರ್ನಲ್ ಅಂಕಗಳನ್ನು ಆಧರಿಸಿ ಮುಂದಿನ ತರಗತಿಗೆ ಬಡ್ತಿ ನೀಡುವುದಾಗಿ ಪ್ರಕಟಿಸಿದೆ. ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ಸೋಮವಾರ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಪರೀಕ್ಷೆ ನಡೆಸದೇ ಇರಲು ತೀರ್ಮಾನ ಕೈಗೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 10ನೇ ತರಗತಿಯಲ್ಲಿ 5,34,903 ವಿದ್ಯಾರ್ಥಿಗಳು ಇದ್ದು, ಎಲ್ಲರನ್ನೂ ಗ್ರೇಡಿಂಗ್ ಆಧಾರದ ಮೇಲೆ ಉತ್ತೀರ್ಣ ಮಾಡಲು ನಿರ್ಧರಿಸಲಾಗಿದೆ.

ತಮಿಳುನಾಡಿನಲ್ಲೂ ಪರೀಕ್ಷೆ ರದ್ದು: ತಮಿಳುನಾಡು ಸರಕಾರ ಕೂಡ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಎಸ್‌ಎಸ್ಎಲ್‌ಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 10ನೇ ತರಗತಿಯಲ್ಲಿ 9.5ಲಕ್ಷ ವಿದ್ಯಾರ್ಥಿಗಳು ಇದ್ದು, ಎಲ್ಲರನ್ನೂ ಗ್ರೇಡಿಂಗ್ ಆಧಾರದ ಮೇಲೆ ಉತ್ತೀರ್ಣ ಮಾಡಲು ನಿರ್ಧರಿಸಲಾಗಿದೆ. ಈ ಹಿಂದೆ ಚತ್ತೀಸ್‌ಗಢ ಮತ್ತು ಪಂಜಾಬ್‌ ಸರಕಾರಗಳು ಕೂಡ ಎಸ್ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದುಪಡಿಸಿದ್ದವು. ಪಂಜಾಬ್‌ ಸರಕಾರ ಈಗಾಗಲೇ ಫಲಿತಾಂಶವನ್ನು ಕೂಡ ಪ್ರಕಟಿಸಿದೆ.

Comments are closed.