ಕರ್ನಾಟಕ

ಇದುವರೆಗೆ ರಾಜ್ಯ ಪೊಲೀಸ್‌ ಇಲಾಖೆಯ 48 ಸಿಬ್ಬಂದಿಗೆ ಸೋಂಕು

Pinterest LinkedIn Tumblr


ಬೆಂಗಳೂರು: ಕೊರೊನಾ ವೈರಸ್‌ ವಿರುದ್ಧದ ಸಮರದಲ್ಲಿ ವೈದ್ಯ ಸಮುದಾಯದಂತೆ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಪೊಲೀಸ್‌ ಇಲಾಖೆಗೂ ಕೋವಿಡ್‌-19 ಬಿಸಿ ತಟ್ಟಿದೆ. ಇಲ್ಲಿಯವರೆಗೂ ರಾಜ್ಯದಲ್ಲಿ 48 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಇದರಲ್ಲಿ 9 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌, ಇದುವರೆಗೂ 48 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ವೈರಸ್‌ ಹರಡುವಿಕೆಯನ್ನು ಗಮನದಲ್ಲಿರಿಸಿಕೊಂಡು ಸಂಪರ್ಕಗಳನ್ನು ಪತ್ತೆ ಹಚ್ಚಿ ಸಿಬ್ಬಂದಿಯನ್ನು ತಕ್ಷಣ ಕ್ವಾರಂಟೈನ್‌ ಮಾಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

48 ಪೊಲೀಸ್‌ ಸಿಬ್ಬಂದಿಯಲ್ಲಿ ಮಂಗಳವಾರ ಸಂಜೆವರೆಗೂ 9 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಸಂಬಂಧ ಪ್ರವೀಣ್‌ ಸೂದ್‌ ನೇತೃತ್ವದಲ್ಲಿ ಹಿರಿಯ ಐಪಿಎಸ್‌ ಅಧಿಕಾರಿಗಳು, ಎಡಿಜಿಪಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸಭೆ ಮಂಗಳವಾರ ನಡೆಯಿತು. ಪರಿಸ್ಥಿತಿಗೆ ತಕ್ಕಂತೆ ಹೊಸ ನಿಯಮಗಳನ್ನು ರಚಿಸಲಾಗಿದೆ ಎಂದು ಸೂದ್‌ ಹೇಳಿದರು..

ಕೊರೊನಾ ವೈರಸ್‌ ವಿರುದ್ಧದ ಹೋರಾಟ ದಿನನಿತ್ಯದ ಸವಾಲಾಗಿದೆ. ಅದರಿಂದ ದೈನಂದಿನ ಆಧಾರದಲ್ಲಿ ಬಹಳಷ್ಟು ವಿಷಯಗಳನ್ನು ಕಲಿಯುತ್ತಿದ್ದೇವೆ ಎಂದು ಪ್ರವೀಣ್‌ ಸೂದ್‌ ಹೇಳಿದ್ದಾರೆ. ಪರಿಸ್ಥಿತಿಯಿಂದ ನಾವು ದೂರ ಹೋಗುತ್ತಿಲ್ಲ, ಈ ಸಮರ ಬಹಳ ದೀರ್ಘವಾದದ್ದು. ಕೊರೊನಾ ಸೋಂಕಿಗೆ ಒಳಗಾದ ಪೊಲೀಸ್‌ ಹಾಗೂ ಅವರ ಕುಟುಂಬ ನಮಗೆ ಆದ್ಯತೆ ಎಂದು ಅವರು ಹೇಳಿದರು.

ನಾನು ಮತ್ತು ಎಡಿಜಿಪಿಗಳಾದ ಅಮರ್‌ ಕುಮಾರ್‌ ಪಾಂಡೆ ಹಾಗೂ ಅಲೋಕ್‌ ಕುಮಾರ್‌ ಶಿವಮೊಗ್ಗ, ತುಮಕೂರು ಹಾಗೂ ಹಾಸನದ ಸಿಬ್ಬಂದಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇವೆ. ಈ ವಾರ ಬೇರೆ ಪ್ರದೇಶಗಳಿಗೆ ತೆರಳಲಿದ್ದೇವೆ. ಕಳೆದ ಮೂರು ತಿಂಗಳಿಂದ ಪೊಲೀಸ್‌ ಇಲಾಖೆ ಶ್ಲಾಘನೀಯ ಕಾರ್ಯ ಮಾಡುತ್ತಿದೆ.

ಮೀಸಲು ಪಡೆಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಏಕೆಂದರೆ ಅವರು ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೆಕ್‌ಪೋಸ್ಟ್‌ಗಳಲ್ಲಿ ಪ್ರಯಾಣಿಕರ ಸ್ಕ್ರೀನಿಂಗ್‌ ಮಾಡುವ ಕೆಲಸ ಮಾಡುತ್ತಿದ್ದಾರೆ. ಸೋಂಕಿನ ಮೂಲ ನಮಗೆ ಗೊತ್ತಿದೆ. ಸೋಂಕಿನ ಸರಪಳಿಯನ್ನು ಮುರಿಯಲು ಇದು ತಕ್ಕ ಸಮಯ ಎಂದಿದ್ದಾರೆ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ ಎಡಿಜಿಪಿ ಅವರ ಫೇಸ್‌ಬುಕ್‌ ಪೋಸ್ಟ್‌ನಂತೆ, ಹಾಸನ ಬೆಟಾಲಿಯನ್‌ನಲ್ಲಿ 3 ಜನ, ಶಿವಮೊಗ್ಗ ಬೆಟಾಲಿಯನ್‌ನಲ್ಲಿ 10 ಜನಕ್ಕೆ ಕೊರೊನಾ ವೈರಸ್‌ ದೃಢಪಟ್ಟಿದೆ. ಇವರೆಲ್ಲಾ ಬೇರೆ ಕಡೆ ತಮ್ಮ ಕರ್ತವ್ಯ ನಿರ್ವಹಿಸಿದ್ದರು.

Comments are closed.