ಕರ್ನಾಟಕ

ಫ್ಲಾಟ್‌ ಕೊಳ್ಳುವವರಿಗೆ ಗುಡ್‌ ನ್ಯೂಸ್‌; ಮನೆಗಳ ನೋಂದಣಿ ಶುಲ್ಕ ಇಳಿಸಿದ ಸರಕಾರ

Pinterest LinkedIn Tumblr

ಬೆಂಗಳೂರು: ಕಡಿಮೆ ದರದಲ್ಲಿ ಮಧ್ಯಮ ವರ್ಗದವರಿಗೆ ಅಪಾರ್ಟ್‌ಮೆಂಟ್‌ಗಳಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಚೇತರಿಕೆ ನೀಡಲು, 20 ಲಕ್ಷ ರೂ. ಮೌಲ್ಯದ ಮನೆಗಳ ನೋಂದಣಿ ಶುಲ್ಕವನ್ನು ಶೇ.5ರಿಂದ ಶೇ.2ಕ್ಕೆ ಹಾಗೂ 35 ಲಕ್ಷ ರೂ. ಮೌಲ್ಯದ ಮನೆಗಳ ನೋಂದಣಿ ಶುಲ್ಕವನ್ನು ಶೇ.5 ರಿಂದ ಶೇ.3ಕ್ಕೆ ಇಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ಕಂದಾಯ ಸಚಿವ ಆರ್‌. ಅಶೋಕ್‌ ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಿದ ಸಭೆ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು ಈ ಸಂಬಂಧ ಸೂಚನೆ ನೀಡಿದರು. ಈ ಮೌಲ್ಯದ ಅಪಾರ್ಟ್‌ಮೆಂಟ್‌ಗಳನ್ನು ಮೊದಲ ಬಾರಿಗೆ ಖರೀದಿಸುವ ಗ್ರಾಹಕರಿಗೆ ಮಾತ್ರ ಇದು ಅನ್ವಯವಾಗಲಿದೆ.

ಇದರಿಂದ ಲಾಕ್‌ಡೌನ್‌ ವೇಳೆ ಫ್ಲಾಟ್‌ ಖರೀದಿಸುವ ಗ್ರಾಹಕರಿಗೆ ಭಾರೀ ಲಾಭವಾಗಲಿದೆ. ನೋಂದಣಿ ಶುಲ್ಕವೇ ಹೆಚ್ಚಾಗಿ ನೀಡುತ್ತಿದ್ದುದ್ದು ಗ್ರಾಹಕರಿಗೆ ತಲೆಬಿಸಿಯಾಗಿತ್ತು. ಇನ್ನು ಸರ್ಕಾರದ ಈ ನಿರ್ಧಾರದಿಂದ ರಿಯಲ್‌ ಎಸ್ಟೇಟ್‌ ವಹಿವಾಟು ಚೇತರಿಕೆ ಕಾಣಲಿದೆ.

164 ತಾಲೂಕುಗಳಲ್ಲಿ ಭೂ ನ್ಯಾಯಮಂಡಳಿ:
ರಾಜ್ಯದ 164 ತಾಲೂಕುಗಳಲ್ಲಿ ಭೂ ನ್ಯಾಯಮಂಡಳಿ ರಚಿಸುವಂತೆಯೂ ಸಿಎಂ ನಿರ್ದೇಶನ ಕೊಟ್ಟಿದ್ದಾರೆ. ಡ್ರೋನ್‌ ಆಧಾರಿತ 16 ಸಾವಿರ ಗ್ರಾಮಗಳನ್ನು ಗುರುತಿಸಲಾಗಿದೆ. ಗ್ರಾಮ ನಿವಾಸಿಗಳಿಗೆ ಅವರ ವಾಸಸ್ಥಳದ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್‌ ನೀಡುವ ಯೋಜನೆ ಇದಾಗಿದ್ದು, ಈ ಪ್ರಕ್ರಿಯೆಗೆ ಚುರುಕುಗತಿ ನೀಡುವಂತೆಯೂ ಸೂಚಿಸಲಾಗಿದೆ.

ರಾಜಸ್ವ ಕೊರತೆ!
ಕೋವಿಡ್‌ ಹಿನ್ನೆಲೆಯಲ್ಲಿ2020 21 ಸಾಲಿನಲ್ಲಿ 3,524 ಕೋಟಿ ರೂ.ಗಳಷ್ಟು ರಾಜಸ್ವ ಕೊರತೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಸ್ಥಗಿತಗೊಂಡಿದೆ. ನೋಂದಣಿ ಆರಂಭವಾದರೂ ಚುರುಕುಗೊಂಡಿಲ್ಲ.

Comments are closed.