ಕರ್ನಾಟಕ

ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಕೊರೊನಾ ನೆಗೆಟಿವ್

Pinterest LinkedIn Tumblr


ಚಿಕ್ಕಮಗಳೂರು: ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಯ 45 ವರ್ಷದ ವೈದ್ಯರಿಗೆ ಕೊರೊನಾ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನ ನಿಟ್ಟುಸಿರುಬಿಟ್ಟಿದ್ದಾರೆ. ಜೊತೆಗೆ ಮೂಡಿಗೆರೆಯ ಸುಶಾಂತ್ ನಗರದ ಜನರು ವೈದ್ಯರನ್ನು ಚಪ್ಪಾಳೆ ಮೂಲಕ ಸ್ವಾಗತಿಸಿದ್ದಾರೆ.

ಮೂಡಿಗೆರೆ ವೈದ್ಯರೊಬ್ಬರಿಗೆ ಕೊರೊನಾ ಶಂಕೆ ವ್ಯಕ್ತವಾಗಿದ್ದರಿಂದ ಚಿಕ್ಕಮಗಳೂರಿನಲ್ಲಿ ಅವರಿಗೆ ಮೇ 19ರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಜಿಲ್ಲಾಡಳಿತ ವೈದ್ಯರಿಗೆ ಕೊರೊನಾ ಸೋಂಕು ತಗುಲಿಲ್ಲ. ತಾಂತ್ರಿಕ ದೋಷದಿಂದ ಪಾಸಿಟಿವ್ ಬಂದಿತ್ತು. ಅವರಿಗೆ ನೆಗೆಟಿವ್ ಬಂದಿದೆ ಎಂದು ಸ್ಪಷ್ಟಪಡಿಸಿ, ವೈದ್ಯರನ್ನು ಕೊರೊನಾ ಚಿಕಿತ್ಸಾ ಘಟಕದಿಂದ ಬಿಡುಗಡೆಗೊಳಿಸಿತ್ತು.

ವೈದ್ಯರು ಇಂದು ಆಸ್ಪತ್ರೆಯಿಂದ ಮೂಡಿಗೆರೆಯ ತಮ್ಮ ಮನೆಗೆ ಹೋಗುತ್ತಿದ್ದಂತೆ ಮೊದಲೇ ಕಾದು ನಿಂತಿದ್ದ ಸುಶಾಂತ್ ನಗರದ ಜನ ಕೊರೊನಾ ವಾರಿಯರ್ಸ್ ಗೆ ಚಪ್ಪಾಳೆಯ ಮೂಲಕ ಸ್ವಾಗತಿಸಿಕೊಂಡಿದ್ದಾರೆ. ಸ್ಥಳೀಯರ ಪ್ರೀತಿಗೆ ವೈದ್ಯರು ಕೂಡ ಅಭಿನಂದನೆ ಸಲ್ಲಿದ್ದಾರೆ.

ನಿಟ್ಟುಸಿರುಬಿಟ್ಟ ಜನ:
ಕೊರೊನಾ ಆರಂಭವಾದಾಗಿನಿಂದ ನೆಮ್ಮದಿಯಿಂದಿದ್ದ ಕಾಫಿನಾಡಿಗರಿಗೆ 55 ದಿನಗಳ ಬಳಿಕ ಬರಸಿಡಿಲು ಬಡಿದಂತಾಗಿತ್ತು. ಮೂಡಿಗೆರೆ ವೈದ್ಯರಿಗೆ ಸೋಂಕು ತಗುಲಿದೆ, 15 ದಿನಗಳ ಅಂತರದಲ್ಲಿ ಸಾವಿರಾರು ಜನರನ್ನ ಸಂಪರ್ಕ ಮಾಡಿದ್ದರೆಂಬ ವಿಷಯ ಮಲೆನಾಡಿಗರ ನಿದ್ದೆಗೆಡಿಸಿತ್ತು. ಆದರೆ ಇಂದು ಜಿಲ್ಲಾಡಳಿತ ಆರು ಪರೀಕ್ಷೆಗಳ ಮೂಲಕ ವೈದ್ಯರಿಗೆ ಸೋಂಕು ತಗುಲಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ವೈದ್ಯರಿಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ಸ್ಪಷ್ಟಪಡಿಸಿದ್ದು ಮಲೆನಾಡಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮೇ 19ರಂದು ಬಂದ ವರದಿಯಲ್ಲಿ ವೈದ್ಯರಿಗೆ ಪಾಸಿಟಿವ್ ಇತ್ತು. ಆದರೆ ಜಿಲ್ಲಾಡಳಿತ ವೈದ್ಯರಲ್ಲಿ ಕೊರೊನಾ ಗುಣಲಕ್ಷಣಗಳು ಕಂಡು ಬರದ ಹಿನ್ನೆಲೆ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ವಿವಿಧ ಲ್ಯಾಬ್‍ಗಳಲ್ಲಿ ಆರು ಬಾರಿ ವೈದ್ಯರ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಿತ್ತು. ಎಲ್ಲಾ ಕಡೆ ನೆಗೆಟಿವ್ ಎಂದು ವರದಿ ಬಂದಿದೆ.

ಜಿಲ್ಲಾಡಳಿತ ಇದನ್ನ ಸರ್ಕಾರದ ಗಮನಕ್ಕೆ ತಂದ ಬಳಿಕ ಸರ್ಕಾರ, ಪಾಸಿಟಿವ್ ಬಂದ ಸ್ಲ್ಯಾಬ್‍ನ ಬೆಂಗಳೂರಿಗೆ ಕಳುಹಿಸಿ ಎಂದು ಸೂಚಿಸಿತ್ತು. ಜಿಲ್ಲಾಡಳಿತ ಅದನ್ನ ಬೆಂಗಳೂರಿಗೆ ಕಳಿಸಿದ ಮೇಲೆ ವೈದ್ಯರ ಗಂಟಲ ದ್ರವವನ್ನ ಬೆಂಗಳೂರಿನ ಎನ್.ಐ.ವಿ. (ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ)ಗೆ ಕಳುಹಿಸಿದ್ದರು. ಅಲ್ಲೂ ಕೂಡ ವರದಿ ನೆಗೆಟಿವ್ ಎಂದು ಬಂದ ಮೇಲೆ ಇಂದು ಜಿಲ್ಲಾಡಳಿತ ವೈದ್ಯರು ಆರೋಗ್ಯವಾಗಿದ್ದಾರೆ. ಅವರಿಗೆ ಸೋಂಕು ತಗುಲಿಲ್ಲ ಎಂದು ಸ್ಪಷ್ಟಪಡಿಸಿದೆ.

400ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್:
ವೈದ್ಯರಿಗೆ ಕೊರೋನ ಪಾಸಿಟಿವ್ ಬಂದ ಹಿನ್ನೆಲೆ ಜಿಲ್ಲಾಡಳಿತ ಅವರೊಂದಿಗೆ ಸಂಪರ್ಕದಲ್ಲಿದ್ದ 800ಕ್ಕೂ ಅಧಿಕ ಜನರನ್ನ ಗುರುತಿಸಿತ್ತು. 400ಕ್ಕೂ ಅಧಿಕ ಜನರನ್ನ ಕ್ವಾರಂಟೈನ್ ಮಾಡಿತ್ತು. ವೈದ್ಯರು 15 ದಿನದಲ್ಲಿ ನೂರಾರು ಜನರನ್ನ ಪರೀಕ್ಷಿಸಿದ್ದಾರೆ. ಅವರಿಂದ ಯಾರಿಗಾದರೂ ಸೋಂಕು ತಗುಲಿರಬಹುದೆಂದು ನೂರಾರು ಜನರನ್ನ ಕ್ವಾರಂಟೈನ್ ಮಾಡಿತ್ತು. ಈಗ ವೈದ್ಯರಿಗೆ ಕೊರೊನಾ ಪಾಸಿಟಿವ್ ಇಲ್ಲ, ನೆಗೆಟಿವ್ ಬಂದಿದೆ ಎಂದಿರೋದ್ರಿಂದ ಮೂಡಿಗೆರೆಯ ಜನ ಸಂತಸಪಟ್ಟಿದ್ದಾರೆ. ಈ ವೈದ್ಯರ ಬಳಿಗೆ ಬೇಲೂರಿನಿಂದಲೂ ರೋಗಿಗಳು ಬಂದಿದ್ದರಿಂದ ಬೇಲೂರಿನಲ್ಲೂ ತಾಲೂಕು ಆಡಳಿತ ಮೈಕ್‍ನಲ್ಲಿ ಅನೌನ್ಸ್ ಮಾಡಿ, ಜನ ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಒಳಪಡಿ ಎಂದು ಸೂಚಿಸಿತ್ತು.

ರಾಜ್ಯದಲ್ಲೇ ವಿಶಿಷ್ಟ ಪ್ರಕರಣ:
ದೇಶ ಹಾಗೂ ರಾಜ್ಯದಲ್ಲಿ ಲಕ್ಷಾಂತರ ಜನಕ್ಕೆ ಕೊರೊನಾ ಬಂದಿದೆ. ಆದರೆ ಯಾವ ಪ್ರಕರಣ ಕೂಡ ವೈದ್ಯರ ಪ್ರಕರಣದಷ್ಟು ಆತಂಕ, ಕುತೂಹಲ ಹುಟ್ಟಿಸಿರಲಿಲ್ಲ. ಯಾಕಂದ್ರೆ, ಯಾವ ಪ್ರಕರಣದಲ್ಲೂ ಸಾವಿರಾರು ಪ್ರೈಮರಿ ಕಂಟಾಕ್ಟ್ ಹೊಂದಿದ್ದ ಪ್ರಕರಣಗಳಿರಲಿಲ್ಲ. ಹಾಗಾಗಿ, ಈ ಪ್ರಕರಣ ವಿಶಿಷ್ಟ ಹಾಗೂ ಕುತೂಹಲಭರಿತ ಪ್ರಕರಣವಾಗಿತ್ತು. ಈ ಕುತೂಹಲವೇ ಜಿಲ್ಲಾಡಳಿತದ ತಲೆನೋವಿಗೆ ಕಾರಣವಾಗಿತ್ತು. ಆದ್ರೀಗ ಜಿಲ್ಲೆಯ ಜನರ ಜೊತೆ ಜಿಲ್ಲಾಡಳಿತ ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಅಧಿಕಾರಿಗಳ ವಿರುದ್ಧ ಜನ ಆಕ್ರೋಶ:
ಯಾವಾಗ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂತೋ ಕೂಡಲೇ ಜಿಲ್ಲಾಡಳಿತ ಕೂಡ ಕಾರ್ಯಪ್ರವೃತರಾಗಿ ಫೀಲ್ಡಿಗಿಳಿದು ವೈದ್ಯರ ಸಂಪರ್ಕದಲ್ಲಿದ್ದವರನ್ನ ಗುರುತಿಸಿಲು ಮುಂದಾಗಿತ್ತು. 400ಕ್ಕೂ ಅಧಿಕ ಜನರನ್ನ ಕ್ವಾರಂಟೈನ್‍ಗೆ ಸಿದ್ಧತೆ ನಡೆಸಿತ್ತು. ಆದರೆ ತಾಲೂಕು ಮಟ್ಟದ ಅಧಿಕಾರಿಗಳು ಶ್ರೀಮಂತರಿಗೆ ಕೈಗೆ ಸೀಲ್ ಹಾಕಿ ಮನೆಗೆ ಕಳುಹಿಸುತ್ತಾರೆ. ಬಡವರನ್ನ ಕ್ವಾರಂಟೈನ್ ಘಟಕಕ್ಕೆ ಕೊಂಡೊಯ್ತಾರೆಂದು ಸ್ಥಳಿಯರು ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ನಮ್ಮ ಬದುಕು ಬಿಟ್ಟು ಬರಲ್ಲ:
ಇಡೀ ಮೂಡಿಗೆರೆ ತಾಲೂಕಿಗೆ ಸಂಚಲನ ಹುಟ್ಟಿಸಿದ್ದ ವೈದ್ಯರ ಪಾಸಿಟಿವ್ ಪ್ರಕರಣದಿಂದ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸರು, ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಹೋಗಿ, ಗ್ರಾಮಕ್ಕೆ ಹೋಗಿ ತಪಾಸಣೆ ನಡೆಸಿದ್ದರು. ಈ ವೇಳೆ ಗ್ರಾಮೀಣ ಭಾಗದ ಜನ ನಾವು ಕ್ವಾರಂಟೈನ್ ಘಟಕಕ್ಕೆ ಬರೋದಿಲ್ಲ. ಏನ್ ಬೇಕಾದ್ರು ಮಾಡಿಕೊಳ್ಳಿ. ಬೇಕಾದ್ರೆ ಎತ್ತಾಕ್ಕೊಂಡ್ ಹೋಗಿ. ನಾವು ನಮ್ಮ ಬದುಕು ಬಿಟ್ಟು ಬರೋದಿಲ್ಲ. ಬೇಕಾದರೆ ತೋಟದಲ್ಲಿ ಒಂದು ಗುಡಿಸಲು ಹಾಕ್ಕೊಂಡ್ ಬೇಯಿಸಿಕೊಂಡು ತಿಂತೀವಿ. ಎಲ್ಲಗೂ ಬರೋದಿಲ್ಲ ಎಂದು ಸರ್ಕಾರದ ವಿರುದ್ಧ ಸವಾಲ್ ಹಾಕದ್ದರು.

ದನ-ಕರು ನೋಡಿಕೊಳ್ಳೋರು ಯಾರು?:
ಅಧಿಕಾರಿಗಳು ಗ್ರಾಮ ಹಾಗೂ ಮನೆಗೆ ಹೋಗಿ ಕ್ವಾರಂಟೈನ್ ಎಂದು ಹೇಳುತ್ತಿದ್ದಂತೆ ಜನ ಭಯಬೀತರಾಗಿದ್ದರು. ಅಧಿಕಾರಿಗಳು ಹಾಗೂ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮನೆಯಲ್ಲಿ ಐದಾರು ದನಕರುಗಳು ಹಾಗೂ ಕುರಿ-ಮೇಕೆಗಳಿವೆ. ಅವುಗಳನ್ನ ಯಾರು ನೋಡಿಕೊಳ್ಳುತ್ತಾರೆ. ನಾವು ಎಲ್ಲಿಗೂ ಬರೋದಿಲ್ಲ ಎಂದು ಬಂದವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಕೆಲವರು ಆರೋಗ್ಯ ಮುಖ್ಯವೆಂದು ಜಾನುವಾರುಗಳಿಗೆ ವ್ಯವಸ್ಥೆ ಮಾಡಿ ಕ್ವಾರಂಟೈನ್ ಘಟಕ ಸೇರಿದ್ದರು.

ಊರಿನತ್ತ ಹೆಜ್ಜೆ ಹಾಕಿದ ಜನ:
ಇಂದು ವೈದ್ಯರಿಗೆ ಕೊರೋನ ಪಾಸಿಟಿವ್ ಇಲ್ಲ. ನೆಗೆಟಿವ್ ಬಂದಿದೆ ಎಂದ ಕೂಡಲೇ ಕ್ವಾರಂಟೈನ್‍ನಲ್ಲಿ ಇದ್ದವರು ಇಲ್ಲದವರು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. ಅಬ್ಬಾ… ದೇವ್ರು ದೊಡ್ಡವನು ಎಂದು ಒಬ್ಬೊರಿಗೊಬ್ಬರು ಹರ್ಷೋದ್ಘಾರ ತೋರಿದ್ದರು. ಮಧ್ಯಾಹ್ನದ ಊಟದ ಬಳಿಕ ತಾಲೂಕಿನ ತುರುವೆ ಮೋರಾರ್ಜಿ ದೇಸಾಯಿ ಶಾಲೆ, ಕೊಟ್ಟಿಗೆಹಾರದ ಏಕಲವ್ಯ ವಸತಿ ಶಾಲೆಯಲ್ಲಿದ್ದ ನೂರಾರು ಜನ ಸಂತೋಷದಿಂದ ತಮ್ಮ ಗ್ರಾಮಗಳತ್ತ ಹೆಜ್ಜೆ ಹಾಕಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಮಲೆನಾಡನ್ನೇ ತಲ್ಲಣಗೊಳಿಸಿದ್ದ ಪ್ರಕರಣವೊಂದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಸುಖಾಂತ್ಯ ಕಂಡಿದೆ. ವೈದ್ಯರಿಗೆ ಪಾಸಿಟಿವ್ ಬಂದಿದೆ ಎಂದು ಮಲೆನಾಡಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಲೆನಾಡಿಗರು ಹಾಗೂ ಅಧಿಕಾರಿಗಳ ಮಧ್ಯೆ ಸಾಕಷ್ಟು ಅಸಮಾಧಾನಗಳು ಹುಟ್ಟಿಕೊಂಡಿದ್ದವು. ಆದರೀಗ ಜಿಲ್ಲಾಡಳಿತವೇ ವೈದ್ಯರಿಗೆ ಸೋಂಕು ತಗುಲಿಲ್ಲ ಎಂದು ಸ್ಪಷ್ಟಪಡಿಸಿರೋದ್ರಿಂದ ಮಲೆನಾಡು ತಣ್ಣಗಾಗಿದೆ.

Comments are closed.