ಕರ್ನಾಟಕ

ದೇವಾಲಯ ತೆರೆಯಲು ಅನುಮತಿ‌ ನೀಡುವಂತೆ ಮುಜರಾಯಿ ಸಚಿವರಿಗೆ ಅರ್ಚಕರ ಒತ್ತಾಯ

Pinterest LinkedIn Tumblr


ಬೆಂಗಳೂರು:ರಾಜ್ಯದ ಮುಜರಾಯಿ‌ ಇಲಾಖೆಗೆ ಒಳಪಡುವ ದೇವಾಲಯಗಳನ್ನು ತೆರೆಯಲು ಅವಕಾಶ ನೀಡುವಂತೆ ಮುಜರಾಯಿ ಸಚಿವರಿಗೆ ಅರ್ಚಕರು ಒತ್ತಾಯಿಸಿದ್ದಾರೆ.

ಮೇ ತಿಂಗಳಾಂತ್ಯಕ್ಕೆ ತಿರುಪತಿ ತಿರುಮಲ ದೇವಸ್ಥಾನ ತೆರೆಯುವ ಚಿಂತನೆ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ರಾಜ್ಯದ ದೇವಾಲಯಗಳನ್ನು ತೆರೆಯಲು ಅನುಮತಿ ನೀಡುವಂತೆ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಅರ್ಚಕರು ಒತ್ತಾಯಿಸಿದ್ದಾರೆ.

ಮೇ 17 ರವರೆಗೂ ಕೇಂದ್ರ ಸರ್ಕಾರ ಲಾಕ್‌ಡೌನ್ ಆದೇಶವನ್ನು ಮುಂದುವರೆಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ನಾವು ದೇವಾಲಯಗಳನ್ನು ಮುಚ್ಚಿದ್ದೇವೆ. ಆದರೆ, ಪ್ರತಿನಿತ್ಯ ದೇವರ ಪೂಜೆ, ದೇವಾಲಯದ ಪ್ರಾಂಗಣದಲ್ಲಿ ಒಬ್ಬರು ಅಥವಾ ಇಬ್ಬರು ಆರ್ಚಕರು ನೆರವೇರಿಸುತ್ತಿದ್ದಾರೆ.

ಇನ್ನು, ದೇವಾಲಯದ ಬಾಗಿಲು ಮುಚ್ಚುವುದು ಆಶುಭದ ಸಂಕೇತ. ಅಲ್ಲದೇ ರಾಜ್ಯಕ್ಕೆ, ದೇಶಕ್ಕೆ ವಕ್ಕರಿಸಿರುವ ಕೊರೋನಾ ವೈರಸ್‌‌ನ ಓಡಿಸಲು ಮನುಷ್ಯರ ಕೈಯಲ್ಲಿ ಆಗುವುದಿಲ್ಲ. ಹೀಗಾಗಿ ನಾವು ದೇವರ ಮೊರೆ ಹೋಗಬೇಕು. ಅಲ್ಲದೇ, ಜನರು ಕೂಡ ದೇವರ ಮೊರೆ ಹೋಗಬೇಕೆಂದು ಆಶಿಸುತ್ತಿದ್ದಾರೆ ಎಂದು ಅವರು ಒತ್ತಾಯಿಸಿದ್ದಾರೆ.

ಕಳೆದ 45-50 ದಿನಗಳಿಂದ ದೇವಾಲಯಗಳು ಬಾಗಿಲು ಮುಚ್ಚಿದ್ದು, ರಾಜ್ಯದಲ್ಲಿ ಧಾರ್ಮಿಕ ಕಾರ್ಯಗಳು ಸಹ ಸ್ಥಗಿತಗೊಂಡಿದೆ.‌ ರಾಜ್ಯದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸಬೇಕೆಂದರೆ, ದೇವರ ಧ್ಯಾನ ಮಾಡುವುದು ಅವಶ್ಯಕವಾಗಿದೆ.ತಿರುಪತಿ ತಿರುಮಲದ ಶ್ರೀನಿವಾಸನೇ ದರ್ಶನ ನೀಡಲು ಮುಂದಾಗುತ್ತಿದ್ದು,ಇಂತಹ ಸಂದರ್ಭದಲ್ಲಿ ನಾವು ಕೂಡ ರಾಜ್ಯದ ದೇವಾಲಯಗಳನ್ನು ತೆರೆದು, ಪೂಜೆ ಸಲ್ಲಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಮಂತ್ರಾಲಯದ ರಾಘವೇಂದ್ರ ಮಠ ಆನ್‌ಲೈನ್‌ನಲ್ಲಿ ಸೇವೆ ಆರಂಭಿಸಿದೆ. ಆದ್ದರಿಂದ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ, ಕಟೀಲು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದೆ, ಶಿರಸಿಯ ಮಾರಿಕಾಂಬಾ, ನಂಜನಗೂಡಿನ ನಂಜುಂಡೇಶ್ವರ, ಮೈಸೂರಿನ ಚಾಮುಂಡೇಶ್ವರಿ, ಕೋಟೆ ಶ್ರೀನಿವಾಸ, ಮಹಾಲಕ್ಷ್ಮೀಲೇಔಟ್‌ನ ಆಂಜನೇಯ ಸೇರಿ ಎಲ್ಲಾ ದೇವಾಲಯಗಳನ್ನು ಸರ್ಕಾರ ಸೂಚಿಸುವ ಮಾರ್ಗದರ್ಶನದಲ್ಲೇ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿ ಎಂದು ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಆಗ್ರಹಿಸಿದ್ದಾರೆ.

ಮುಜರಾಯಿ ಇಲಾಖೆ ದೇವಾಲಯಗಳನ್ನು ತೆರೆಯಲು ಸರ್ಕಾರದ ವತಿಯಿಂದ ಅನುಮತಿ ಕೊಡಿಸುವ ಮೂಲಕ ಇಲಾಖೆಯ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಬಳಿ ಚರ್ಚಿಸಿ, ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇನ್ನು, ಮೇ ತಿಂಗಳ 23 ರಿಂದ ಜ್ಯೇಷ್ಠ ಮಾಸ ಆರಂಭವಾಗುತ್ತಿದೆ. ಚೈತ್ರ ಮತ್ತು ವೈಶಾಖ ಮಾಸದಲ್ಲಿ ದೇವಾಲಯಗಳು ಮುಚ್ಚಲ್ಪಟ್ಟಿದೆ. ಕನಿಷ್ಠ ಪಕ್ಷ ಜ್ಯೇಷ್ಠ ಮಾಸದಲ್ಲಾದ್ದರೂ ದೇವಾಲಯಗಳು ತೆರೆಯವಂತಾಗಲಿ.ಈಗಾಗಲೇ ಯುಗಾದಿ, ರಾಮನವಮಿ, ಚಿತ್ರಾ ಪೂರ್ಣಿಮೆಯ ಕರಗ, ನರಸಿಂಹ ಜಯಂತಿ ಸೇರಿದಂತೆ ಎಲ್ಲಾ ಧಾರ್ಮಿಕ ಆಚರಣೆಗೆ ಧಕ್ಕೆಯಾಗಿದೆ. ಇನ್ನು ಮುಂದೆಯಾದರೂ ದೇವಾಲಯಗಳಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆಯುವಂತಾಗಬೇಕು. ಹೀಗಾಗಿ, ರಾಜ್ಯದ ಮುಜರಾಯಿ ಇಲಾಖೆ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬೇಕು ಎಂದು ಆರ್ಚಕರು ಒತ್ತಾಯಿಸಿದ್ದಾರೆ.

Comments are closed.