ಕರ್ನಾಟಕ

ಮಾಸ್ಕ್ ಧರಿಸದಿದ್ದರೆ 100 ರಿಂದ 500 ರೂ.ವರೆಗೆ ದಂಡ: ಗೋವಿಂದ ಕಾರಜೋಳ

Pinterest LinkedIn Tumblr


ಬಾಗಲಕೋಟೆ: ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್-19 (Covid-19) ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮೇ 17ರವರೆಗೆ ಲಾಕ್‍ಡೌನ್‍ನ್ನು ಮುಂದುವರೆಸಲಾಗಿದ್ದು, ಅಲ್ಲಿಯವರೆಗೆ ಕಡ್ಡಾಯವಾಗಿ ಮಾಸ್ಕ ಧರಿಸದಿದ್ದರೆ 100 ರಿಂದ 500 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ (Govind M Karjola) ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಮಾಸ್ಕ್ (Mask) ಗಳನ್ನು ಕಡ್ಡಾಯವಾಗಿ ಧರಿಸಬೇಕು. ಧರಿಸದೇ ಇದ್ದಲ್ಲಿ 100 ರೂಪಾಯಿ ದಂಡ ವಿಧಿಸಲಾಗುವುದು. 2ನೇ ಬಾರಿ ಮಾಸ್ಕ ಧರಿಸದೇ ಇರುವುದು ಕಂಡುಬಂದಲ್ಲಿ 500 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ ಎಂದರು.

ಕಳೆದ ಮಾರ್ಚ 24 ರಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಕೆಲವು ಕಠಿಣ ಕ್ರಮಕೈಗೊಂಡಿದೆ. ಕೋವಿಡ್ ಸೋಂಕನ್ನು ಇನ್ನಷ್ಟು ನಿಯಂತ್ರಣದಲ್ಲಿಡಲು ಕೆಂಪು, ನೆರಳೆ ಹಾಗೂ ಹಸಿರು ಎಂಬ ಮೂರು ವಲಯಗಳನ್ನಾಗಿ ಮಾಡಿ ಕೆಲವೊಂದು ಸಡಿಲಿಕೆ ಮಾಡುವ ಮೂಲಕ ಮೇ 17ರವರೆಗೆ ಲಾಕ್‍ಡೌನ್ ಮುಂದುವರಿಸಲಾಗಿದೆ. ಕರ್ನಾಟಕ ರಾಜ್ಯವು ನೇರಳೆ ವಲಯದಲ್ಲಿದ್ದು, ಲಾಕ್‍ಡೌನ್‍ದಲ್ಲಿ ಕೆಲವು ಸಡಿಲಿಕೆ ನೀಡಲಾಗಿದ್ದು, ಜಿಲ್ಲೆಯ ಗಡಿಭಾಗಗಳನ್ನು ಶೀಲ್ ಮಾಡಲಾಗಿದೆ ಎಂದರು.

ಕೇಂದ್ರ ಸರಕಾರದ ಆದೇಶದನ್ವಯ ಜಿಲ್ಲೆಯಾದ್ಯಂತ ಮೇ 4 ರಿಂದ 17 ವರೆಗೆ ಮದ್ಯರಾತ್ರಿವರೆಗೆ ಲಾಕ್‍ಡೌನ್ ಮುಂದುವರೆಯಲಿದ್ದು, ರಾತ್ರಿ 7 ರಿಂದ ಬೆಳಿಗ್ಗೆ 7 ವರೆಗೆ ಸಿ.ಆರ್.ಪಿ.ಸಿ ಕಲಂ 144 ವಿಧಿಸಲಾಗಿದೆ. ಜಿಲ್ಲೆಯಲ್ಲಿ ಜರಗುವ ಸಂಜೆ, ಜಾತ್ರೆ ಹಾಗೂ ಸಮಾರಂಭಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕೃಷಿ ಚಟುವಟಿಕೆಗಳು ನಡೆಯಲಿದ್ದು, ಬೀಜ ಮತ್ತು ರಸಗೊಬ್ಬರಗಳ ಕೊರತೆ ಇರುವದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯ ಕಾಮಗಾರಿಗಳು ಚಾಲ್ತಿಯಲ್ಲಿರುತ್ತವೆ. ಅವಶ್ಯಕ ಹಿಟ್ಟಿನ ಗಿರಣಿ, ಖಾರಾ ಕುಟ್ಟುವ ಯಂತ್ರ, ಅಗತ್ಯ ವಸ್ತುಗಳ ಘಟಕಗಳು, ಬೀಜೋತ್ಪಾದನಾ ಕೇಂದ್ರಗಳು, ಕೈಗಾರಿಕೆಗಳು ನಡೆಯಲಿವೆ ಎಂದರು.

ಜಿಲ್ಲೆಯ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಇತರೆ ವ್ಯಕ್ತಿಗಳು ಬೇರೆ ರಾಜ್ಯಕ್ಕೆ ತೆರಳಬೇಕಾದಲ್ಲಿ ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದಾಗಿದೆ. ಜಿಲ್ಲೆಯಿಂದ ರಾಜ್ಯದ ಬೇರೆ ಜಿಲ್ಲೆಗೆ ಸ್ವಂತ ವಾಹನಗಳಲ್ಲಿ ಪ್ರಯಾಣಿಸುವವರು ಜಿಲ್ಲೆಯಲ್ಲಿ ಪ್ರಾರಂಭಿಸಿದ ತಂತ್ರಾಂಶದ ಮೂಲಕ ಒನ್-ಟೈಮ್, ಒನ್-ಡೇ, ಒನ್-ವೇ ಗೆ ಮಾತ್ರ ಪಾಸನ್ನು ಅರ್ಜಿ ಸಲ್ಲಿಸಿ ಸಂಬಂಧಿಸಿದ ತಹಶೀಲ್ದಾರರ ಮೂಲಕ ಪಡೆದುಕೊಳ್ಳಬಹುದಾಗಿದೆ ಎಂದರು.

ಸರಕಾರದ ಆದೇಶದಂತೆ ಎಲ್ಲಾ ಕುಟುಂಬಗಳ 60 ವರ್ಷ ಮೇಲ್ಪಟ್ಟ ಬಿಪಿ, ಸಕ್ಕರೆ ಕಾಯಿಲೆ, ಹೃದಯ ರೋಗ, ಗರ್ಭೀಣಿ ಸ್ತ್ರೀಯರ ಆರೋಗ್ಯ ಮಾಹಿತಿ ಸಂಗ್ರಹಿಸಲು ಬಿ.ಎಲ್.ಓ ಹಾಗೂ ಒಬ್ಬ ಹೆಚ್ಚುವರಿ ಶಿಕ್ಷಕರ ತಂಡ ರಚಿಸಿ ಸಮೀಕ್ಷೆ ಕಾರ್ಯ ಪ್ರಾರಂಭಿಸಲಾಗುತ್ತದೆ. ಎಂದಿನಂತೆ ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಶಾಪ್ ತೆರೆದಿರುತ್ತವೆ. ಸಾರ್ವಜನಿಕರು ಮಾಸ್ಕ್‍ಗಳನ್ನು ಕಡ್ಡಾಯವಾಗಿ ಧರಿಸಬೇಕು. ಧರಿಸದೇ ಇದ್ದಲ್ಲಿ 100 ರೂ.ಗಳ ದಂಡ ವಿಧಿಸಲಾಗುವುದು. 2ನೇ ಬಾರಿ ಮಾಸ್ಕ ಧರಿಸದೇ ಇರುವುದು ಕಂಡುಬಂದಲ್ಲಿ 500 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲಂದರಲ್ಲಿ ಗುಟುಕಾ, ಎಲೆ ಅಡಿಕೆ ತಿಂದು ಉಗುಳಬಾರದು. ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಪಡೆಯಲು ಬ್ಯಾಂಕ್‍ಗಳಿಗೆ ತೆರಳುವ ಬದಲು ಅಂಚೇ ಕಚೇರಿಗೆ ದೂರವಾಣಿ ಮೂಲಕ ಕರೆ ಮಾಡಿದಲ್ಲಿ ಅಂಚೆ ಇಲಾಖೆಯವರು ಮನೆ ಬಾಗಿಲಿಗೆ ಬಂದು ಹಣ ಸಂದಾಯ ಮಾಡಲಿದ್ದಾರೆ ಇದರ ಪ್ರಯೋಜ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ ಎಂದರು.

ಜಿಲ್ಲೆಯ ಬಾಗಲಕೋಟೆ, ಮುಧೋಳ, ಜಮಖಂಡಿ ನಗರ ಮತ್ತು ಮುಗಳಖೋಡ ಗ್ರಾಮದಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, ಅಲ್ಲಿ ಈಗಾಗಲೇ ಕಂಟೈನ್‍ಮೆಂಟ್ ಝೋನ್‍ನಲ್ಲಿ ನಿರ್ಬಂಧ ಹೇರಲಾಗಿದೆ. ಪ್ರತಿಯೊಂದು ಝೋನ್‍ಗಳಿಗೆ ಇನ್ಸಿಡೆಂಟ್ ಕಮಾಂಡರ್ ನೇಮಿಸಲಾಗಿದೆ. ಕಂಟೈನ್‍ಮೆಂಟ್ ಝೋನ್ ನಿರ್ಬಂಧ ಹಿಂಪಡೆಯಲು ಆ ಪ್ರದೇಶದ ಕೊನೆಯ ಪ್ರಕರಣ ದಾಖಲಾದ ದಿನಾಂಕದಿಂದ 28 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳು ದಾಖಲಾಗದಿದ್ದಲ್ಲಿ ಅವಕಾಶವಿರುತ್ತದೆ. ಬಾಗಲಕೋಟೆ ನಗರದಲ್ಲಿ ಏಪ್ರೀಲ್ 15, ಮುಗಳಖೋಡದಲ್ಲಿ ಏಪ್ರೀಲ್ 12, ಜಮಖಂಡಿ ನಗರದಲ್ಲಿ ಮೇ 2 ಹಾಗೂ ಮುಧೋಳದಲ್ಲಿ ಮೇ 3 ರಂದು ಪ್ರಕರಣಗಳು ದಾಖಲಾಗಿರುತ್ತವೆ ಎಂದರು. ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ ಜೊತೆಗಿದ್ದರು.

Comments are closed.