ಕರ್ನಾಟಕ

ರಾಜ್ಯದಲ್ಲಿ ಒಂದೇ ದಿನ 17 ಪ್ರಕರಣಗಳು ಪತ್ತೆ; ಸೋಂಕಿತರ ಸಂಖ್ಯೆ 277 ಕ್ಕೆ ಏರಿಕೆ

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆಯಾಗಿರುವ ನಡುವೆ, ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ.

ಏ.15 ರಂದು ಒಂದೇ ದಿನ 17 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 277 ಕ್ಕೆ ತಲುಪಿದೆ. ಇವತ್ತಿನ ವರದಿಗಳನ್ನು ಗಮನಿಸಿದರೆ ಮೈಸೂರು-ಬೆಂಗಳೂರು ಕೊರೋನಾ ವೈರಸ್ ನ ಹಾಟ್ ಸ್ಪಾಟ್ ಆಗಿರುವ ಮತ್ತಷ್ಟು ಸ್ಪಷ್ಟವಾಗಿದೆ.

ಇಂದು ಒಂದೇ ದಿನ ಮೈಸೂರಿನಲ್ಲಿ ಬರೊಬ್ಬರಿ 10 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 9 ಪ್ರಕರಣಗಳು ಔಷಧೀಯ ಕಾರ್ಖಾನೆಯ ಉದ್ಯೋಗಿಗಳದ್ದಾಗಿದೆ.

ಕಲಬುರಗಿಯಲ್ಲಿ ಒಂದು ವರ್ಷದ ಮಗುವಿಗೆ ಸೋಂಕು ತಗುಲಿರುವ ಒಂದು ಪ್ರಕರಣ, ಬಾಗಲಕೋಟೆಯಲ್ಲಿ ಶಿಕ್ಷಕಿಯ ಪತಿ ಹಾಗೂ ಪೊಲೀಸ್ ಪೇದೆಗೆ ಕೊರೋನಾ ಸೋಂಕು ಬಂದಿರುವ 2 ಪ್ರಕರಣಗಳು ವರದಿಯಾಗಿವೆ. ವಿಜಯಪುರದಲ್ಲಿ 2 ಪ್ರಕರಣ ಪತ್ತೆಯಾಗಿದ್ದರೆ ಬೆಂಗಳೂರಿನಲ್ಲಿ 2 ಪ್ರಕರಣಗಳು ವರದಿಯಾಗಿವೆ.

ಜಿಲ್ಲಾವಾರು ಇಂದು ವರದಿಯಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ಹೀಗಿದೆ.
ಮೈಸೂರು: 10
ಬೆಂಗಳೂರು: 2
ಕಲಬುರಗಿ: 1
ವಿಜಯಪುರ: 2
ಬಾಗಲಕೋಟೆ: 2

ಒಂದೇ ದಿನ ಕೋವಿಡ್-19 ನಿಂದ 2 ಸಾವು: 11 ಕ್ಕೆ ಏರಿಕೆ
ಚಿಕ್ಕಬಳ್ಳಾಪುರದ 69 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ. ಪಾರ್ಥಿವ ಶರೀರವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ‌ ಇಡಲಾಗಿದ್ದು, ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಅಂತ್ಯಕ್ರಿಯೆಗೆ ಇಲಾಖೆಯು ಸಿದ್ಧತೆ ನಡೆಸುತ್ತಿದೆ. ದಯಮಾಡಿ ಸಾರ್ವಜನಿಕರು ಮನೆಯಲ್ಲೇ ಸುರಕ್ಷಿತವಾಗಿರಬೇಕು ಎಂದು ವಿನಂತಿಸುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅವರು, ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 17 ಹೊಸ ಕೋವಿಡ್ -19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 277ಕ್ಕೆ ಏರಿದೆ. 75 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಕಷ್ಟದ ಸಮಯದಲ್ಲಿ ನಾಗರೀಕರು ಮನೆಯಲ್ಲಿಯೇ ಸುರಕ್ಷಿತವಾಗಿ ಇರಬೇಕೆಂದು ಕಳಕಳಿಯ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Comments are closed.