
ಬೆಂಗಳೂರು(ಏ.14): ಪ್ರಧಾನಿ ನರೇಂದ್ರ ಮೋದಿಯವರು ಮೇ 3ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿದ್ದಾರೆ. ಅವರ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ನಾಳೆ ಮೋದಿ ಮಾರ್ಗಸೂಚಿಗಳನ್ನು ಪ್ರಕಟ ಮಾಡಲಿದ್ದಾರೆ. ಅವರ ಮಾರ್ಗ ಸೂಚಿಯಂತೆ ನಾವು ಹಲವು ಕ್ರಮಗಳನ್ನು ಜಾರಿ ಮಾಡಲಿದ್ದೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್ವೈ, ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು. ರಾಜ್ಯದಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಪ್ರಧಾನಿ ನೀಡಿದ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿದ್ದಾರೆ. ಮನೆಯಲ್ಲೇ ಮಾಸ್ಕ್ ತಯಾರಿ ಮಾಡುವಂತೆ ಹೇಳಿದ್ದಾರೆ. ಇವೆಲ್ಲವುಗಳನ್ನು ನಾವು ಕಟ್ಟು ನಿಟ್ಟಾಗಿ ಪಾಲನೆ ಮಾಡುತ್ತೇವೆ ಎಂದರು.
ಈಗ ಇರುವುದಕ್ಕಿಂತ ಮತ್ತಷ್ಟು ಬಿಗಿ ಭದ್ರತೆ ಮಾಡುತ್ತೇವೆ. ಈಗಾಗಲೇ ಹಲವು ರಾಜ್ಯಗಳಲ್ಲಿ ವಿಸ್ತರಣೆ ಮಾಡಿದ್ದಾರೆ. ನಾವು ಪ್ರಧಾನಿಗಳ ನಿರ್ದೇಶನಕ್ಕಾಗಿ ಕಾಯುತ್ತಿದ್ದೆವು. ಇವಾಗ ಪ್ರಧಾನಿಗಳು ಹೇಳಿರುವುದರಿಂದ ಮತ್ತಷ್ಟು ಬಿಗಿ ಭದ್ರತೆ ಮಡಲಾಗುತ್ತದೆ. ಮೇ 3ರ ತನಕ ಮತ್ತಷ್ಟು ಕಠಿಣ ಕ್ರಮ ಮಾಡುತ್ತೇವೆ. ಮೇ 3ರ ನಂತರ ಎಲ್ಲಾ ಚಟುವಟಿಕೆಗಳು ನಡೆಯಬೇಕು ಎಂಬುದು ನಮ್ಮ ಆಶಯ. ಹೀಗಾಗಿ ಮೇ 3ರೊಳಗೆ ಕೊರೋನಾ ನಿಯಂತ್ರಣಕ್ಕೆ ಬರಬೇಕು ಅಷ್ಟೇ ಎಂದರು.
ಇದುವರೆಗೂ 57,633 ವಾಹನಗಳನ್ನು ಸೀಜ್ ಮಾಡಲಾಗಿದೆ. 2181 ಜನರ ಮೇಲೆ ಎಫ್ಐಆರ್ ಹಾಕಲಾಗಿದೆ. 85 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಇವತ್ತಿನಿಂದ ಮತ್ತಷ್ಟು ಕಠಿಣ ಕ್ರಮಗಳನ್ನು ಮಾಡುತ್ತೇವೆ.ಇದಕ್ಕೆ ಜನರು ಸಹಕಾರ ಕೊಡಬೇಕು.
ನಾಳೆಯಿಂದ ಮದ್ಯ ಮಾರಾಟ?
ಮದ್ಯ ಮಾರಾಟ ಕುರಿತಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಎಲ್ಲಾ ಕೇಂದ್ರ ಸರ್ಕಾರದ ಮಾರ್ಗ ಸೂಚಿಗಳಂತೆ ಮಾಡಲಾಗುವುದು. ಮಾರ್ಗ ಸೂಚಿ ಪ್ರಕಟವಾದ ನಂತರ ಮದ್ಯ ಮಾರಾಟದ ತೀರ್ಮಾನ ಮಾಡಲಾಗುತ್ತದೆ ಎಂದರು.ಏಪ್ರಿಲ್ 20ರವರೆಗೆ ಪ್ರಧಾನಿಯವರು ತಿಳಿಸಿದಂತೆ ಇನ್ನಷ್ಟು ಕಟ್ಟುನಿಟ್ಟಾಗಿ ಲಾಕ್ ಡೌನ್ ಪಾಲನೆ ಮಾಡಲಾಗುತ್ತದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತೇವೆ. ನಾಡಿನ ಜನತೆ ಸ್ವಯಂ ಪ್ರೇರಿತರಾಗಿ ಈ ಕ್ರಮಗಳಿಗೆ ಸಹಕರಿಸಬೇಕು. ಪ್ರಧಾನಿಯವರು ಹೇಳಿದಂತೆ ದೇಶದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿಯೂ ಆರೋಗ್ಯ ಸೌಲಭ್ಯಗಳನ್ನು ಕಳೆದ ಎರಡು ತಿಂಗಳಲ್ಲಿ ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿಯವರು ನೀಡಿದ ಏಳು ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿ ಎಂದು ರಾಜ್ಯದ ಜನರಲ್ಲಿ ನಾನು ಮನವಿ ಮಾಡುತ್ತೇನೆ ಎಂದರು.
ಮನೆಯ ಹಿರಿಯರ ವಿಶೇಷ ಕಾಳಜಿ ವಹಿಸಿ. ಯಾವುದೇ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಹೆಚ್ಚು ಜೋಪಾನ ಮಾಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮನೆಯಲ್ಲಿ ಮಾಡಿದ ಮಾಸ್ಕ್ ಬಳಸಿ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಇಲಾಖೆಯ ಸಲಹೆಗಳನ್ನು ಪಾಲಿಸಿ. ಬಿಸಿನೀರು, ಕಷಾಯ ಕುಡಿಯಿರಿ. ಆರೋಗ್ಯ ಸೇತು ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. ಬಡ ಕುಟುಂಬಗಳಿಗೆ ನೆರವಾಗಿ. ನಿಮ್ಮ ಕೃಷಿ, ಉದ್ಯೋಗದಲ್ಲಿ ಸಹೋದ್ಯೋಗಿಗಳಿಗೆ, ನೌಕರರಿಗೆ ನೆರವಾಗಿ. ನೌಕರಿಯಿಂದ ತೆಗೆಯಬೇಡಿ. ಪೊಲೀಸ್, ಆರೋಗ್ಯ ಕಾರ್ಯಕರ್ತರು, ಪೌರ ಕಾರ್ಮಿಕರನ್ನು ಗೌರವಿಸಿ. ದೇಶದಲ್ಲಾಗಲಿ, ರಾಜ್ಯದಲ್ಲಾಗಲಿ, ಅಗತ್ಯ ವಸ್ತುಗಳ ಪೂರೈಕೆಗೆ, ಔಷಧಿ ಪೂರೈಕೆಗೆ ಯಾವುದೇ ತೊಂದರೆ ಇಲ್ಲ.
ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಕ್ರಮ ವಹಿಸಲಾಗುವುದು. ವಿಶೇಷವಾಗಿ ವಲಸೆ ಕಾರ್ಮಿಕರು ಎಲ್ಲಿದ್ದೀರೋ ಅಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದು ಮನವಿ ಮಾಡುತ್ತೇನೆ. ಮೇ 3ವರೆಗೆ ಲಾಕ್ ಡೌನ್ ನಿಯಮ ಪಾಲಿಸಿ. ಎಲ್ಲಿದ್ದೀರೋ ಅಲ್ಲೇ ಸುರಕ್ಷಿತವಾಗಿರಿ ಎಂದು ಹೇಳಿದರು.
Comments are closed.