é
ಬೆಂಗಳೂರು: ಇದೊಂದು ಸಣ್ಣ ಜ್ವರ ಅಷ್ಟೇ. ಕೊರೊನಾಗೆ ಭಯಪಡಬೇಕಾದ ಅಗತ್ಯವಿಲ್ಲ. ಸರಿಯಾಗಿ ಚಿಕಿತ್ಸೆ ಪಡೆದರೆ ರೋಗ ಖಂಡಿತವಾಗಿ ವಾಸಿಯಾಗುತ್ತದೆ ಎಂದು ಸೋಂಕುನಿಂದ ಗುಣಮುಖರಾದ ವೆಂಕಟ್ ರಾಘವ್ ತಿಳಿಸಿದ್ದಾರೆ.
ಮಾರ್ಚ್ 8 ರಂದು ಅಮೆರಿಕದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವೆಂಕಟ್ ರಾಘವ್‍ರನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 20 ದಿನಗಳ ಕಾಲ ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆದ ವೆಂಕಟ್ ರಾಘವ್ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅವರನ್ನು ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.
ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕವನಿದ್ದಾಗ ಜ್ವರ ಬಂದಿತ್ತು. ಆದಾದ ನಂತರ ನನಗೆ ಈ ಪ್ರಮಾಣದ ಜ್ವರ ಬಂದಿರಲಿಲ್ಲ. ಪ್ರತಿದಿನ 100 ಡಿಗ್ರಿ ಮೇಲೆ ಜ್ವರ ಇತ್ತು. ಈ ಸಂದರ್ಭದಲ್ಲಿ ನಾನು ಮಹಾಮೃತ್ಯಂಜಯ ಮಂತ್ರವನ್ನು ಜಪಿಸುತ್ತಿದ್ದೆ. ಈ ಜ್ವರದ ಸಮಸ್ಯೆ ಏನೆಂದರೆ ವಿಪರೀತ ಸುಸ್ತಾಗುತ್ತದೆ. ಅಷ್ಟೇ ಅಲ್ಲದೇ ಮನಸ್ಸು ನಿಯಂತ್ರಣ ಕಳೆದುಕೊಂಡು ಬಿಡುತ್ತದೆ. ಜ್ವರ ಉತ್ಸಾಹವನ್ನು ಇಳಿಸಿಬಿಡುತ್ತದೆ ಎಂದು ತಮಗಾದ ಅನುಭವವನ್ನು ವಿವರಿಸಿದರು.
ಕುಟುಂಬದ ಬೆಂಬಲ ಇತ್ತು ಚೆನ್ನಾಗಿ ಇತ್ತು. ಆತ್ಮೀಯರು ಸಹ ನನ್ನ ಜೊತೆ ಚೆನ್ನಾಗಿ ಮಾತನಾಡುತ್ತಿದ್ದರು. ನಾನು ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ಎಲ್ಲರ ಆತ್ಮವಿಶ್ವಾಸದ ನುಡಿಗಳಿಂದ ನಾನು ಚೇತರಿಕೆಯಾಗಿದ್ದೇನೆ ಎಂದು ಅವರು ಹೇಳಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಹೇಗಿತ್ತು ಎನ್ನುವ ಪ್ರಶ್ನೆಗೆ, ನಾನು ತೆರಿಗೆ ಪಾವತಿಸುವ ಸರ್ಕಾರಿ ಆಸ್ಪತ್ರೆ ಅಂದ್ರೆ ಏನೋ ಅಂದುಕೊಂಡಿದ್ದೆ. ನಾನು ಚಿಕಿತ್ಸೆಗೆ ಕಾರ್ಪೋರೇಟ್ ಆಸ್ಪತ್ರೆಗೆ ಹೋಗುತ್ತಿದ್ದೆ. ಆದರೆ ಇಲ್ಲಿಯವರೆಗೆ ಸರ್ಕಾರಿ ಆಸ್ಪತ್ರೆಯ ಬಗ್ಗೆ ಏನು ಭ್ರಮೆಯಿತ್ತೋ ಅದೆಲ್ಲವು ಈಗ ಬಿದ್ದು ಹೋಯ್ತು. ವೈದ್ಯರು ನನ್ನನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ. ಪ್ರತಿ ದಿನವು ಉತ್ತಮ ಸಲಹೆಗಳನ್ನು ನೀಡುತ್ತಿದ್ದರು. ಕೌನ್ಸಿಲಿಂಗ್ ಮಾಡುವ ಮೂಲಕ ನನ್ನಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದರು. ಅವರಿಗೆಲ್ಲ ನಾನು ಥ್ಯಾಂಕ್ಸ್ ಹೇಳುತ್ತೇನೆ ಎಂದು ತಿಳಿಸಿದರು.
ಡಿಸ್ಚಾರ್ಜ್ ವೇಳೆ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಜನರಲ್ಲಿ ಕೊರೊನಾ ಭಯವನ್ನು ಹೊಗಲಾಡಿಸಬೇಕು ಎಂದು ತಿಳಿಸಿದ್ದಾರೆ. ಅದಕ್ಕಾಗಿ ನಾನು ಕನ್ನಡ ಮತ್ತು ಇಂಗ್ಲಿಷಿನಲ್ಲಿ ವಿಡಿಯೋ ಮಾತನಾಡಿದ್ದೇನೆ ಎಂದು ಆತ್ಮವಿಶ್ವಾಸದ ನುಡಿಯನ್ನು ಆಡಿದರು.
ಕೊರೊನಾ ವೈರಸ್ ಹೇಗೆ ಬಂದಿರಬಹುದು ಎನ್ನುವ ಪ್ರಶ್ನೆಗೆ, ಕೊರೊನಾ ವಿಚಾರ ಗೊತ್ತಾಗಿ ನಾನು ವಿಮಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದೆ. ಆದರೆ ವಿಮಾನ ನಿಲ್ದಾಣದ ಸೆಕ್ಯೂರಿಟಿ ಚೆಕ್ಕಿಂಗ್ ನಲ್ಲಿ ನಾನು ಸಿಕ್ಕಿಬಿದ್ದೆ. ಅಲ್ಲಿ ಫಿಂಗರ್ ಪ್ರಿಂಟ್ ಚೆಕ್ ಆಗಲೇಬೇಕಿತ್ತು. ಇದರಿಂದಾಗಿ ನನಗೆ ಸೋಂಕು ಬಂದಿರಬಹುದು ಎಂದು ಅವರು ವಿವರಿಸಿದರು.
ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಟಲಿ, ಅಮೆರಿಕದಲ್ಲಿನ ಘಟನೆ ನೋಡುವಾಗ ಬಹಳ ಬೇಸರವಾಗುತ್ತದೆ. ಲಾಕ್‍ಡೌನ್ ನಿಯಮವನ್ನು ಪಾಲಿಸಿ ಮನೆಯಲ್ಲೇ ಇರಿ. ಸಾಮಾಜಿಕ ಆಂತರವನ್ನು ಕಾಯ್ದುಕೊಳ್ಳಿ ಎಂದು ವೆಂಕಟ್ ರಾಘವ್ ಮನವಿ ಮಾಡಿದರು.
Comments are closed.