
ಬೆಂಗಳೂರು: ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಎ. 15ರ ತನಕ ದೇಶವೇ ಲಾಕ್‌ಡೌನ್ ಆಗಿರುವುದರಿಂದ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ಪಾವತಿ ಮಾಡಿಸಿಕೊಳ್ಳದಂತೆ ಸರಕಾರ ನಿರ್ದೇಶ ನೀಡಿದ್ದರೂ ಕೆಲವು ಖಾಸಗಿ ಶಾಲಾಡಳಿತ ಮಂಡಳಿಗಳು ಉಲ್ಲಂಘಿಸುತ್ತಿವೆ.
ರಾಜ್ಯ ಸರಕಾರದ ಸೂಚನೆಯ ನಡುವೆಯೇ ಕೆಲವು ಖಾಸಗಿ ಶಾಲೆಗಳು ಆನ್‌ಲೈನ್ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವುದು, ವಿದ್ಯಾರ್ಥಿಗಳ ಪಾಲಕರಲ್ಲಿ ಶುಲ್ಕ ಪಾವತಿಸಲು ಒತ್ತಡ ಹೇರುತ್ತಿರುವುದು ಕಂಡುಬಂದಿದೆ. ಸರಕಾರಿ ಶಾಲೆಗಳ ದಾಖಲಾತಿ, ಆರ್‌ಟಿಇ ಅಡಿಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಮತ್ತು ಖಾಸಗಿ ಶಾಲೆಗಳ ದಾಖಲಾತಿ ಸಹಿತವಾಗಿ ಎಲ್ಲವನ್ನು ಫೆ. 20ರ ವರೆಗೆ ಮುಂದೂಡುವಂತೆ ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಅದರಂತೆ ಸರಕಾರದ ಎಲ್ಲ ಶಾಲೆಗಳ ಪ್ರವೇಶ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಆದರೆ ನಗರ ಪ್ರದೇಶದಲ್ಲಿರುವ ಕೆಲವೊಂದು ಖಾಸಗಿ ಶಾಲೆಗಳು 2020-21 ನೇ ಸಾಲಿನ ಶೈಕ್ಷಣಿಕ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಆರಂಭಿಸಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಲ್ಲದೆ ವಿದ್ಯಾರ್ಥಿಗಳ ಪಾಲಕರಿಗೆ ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ನಿರ್ದೇಶಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕೆಲವೊಂದು ಶಾಲಾಡಳಿತ ಮಂಡಳಿಗಳು ಎ.14ರ ಬಳಿಕ ದಾಖಲಾತಿ ಪ್ರಕ್ರಿಯೆ ನಡೆಸುವುದಾಗಿ ವೇಳಾಪಟ್ಟಿ ಪ್ರಕಟಿಸಿವೆ. ಈ ವಿಚಾರವಾಗಿ ಖಾಸಗಿ ಶಾಲಾಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿ ರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಎ. 20ರವರೆಗೆ ಯಾರು ಕೂಡ ದಾಖಲಾತಿ ಅಥವಾ ಶುಲ್ಕ ಪಾವತಿಸಿಕೊಳ್ಳುವುದನ್ನು ಮಾಡುವಂತಿಲ್ಲ. ಯಾವುದಾದರೂ ಶಾಲಾಡಳಿತ ಮಂಡಳಿ ಸರಕಾರದ ಸೂಚನೆ ಮೀರಿ ಪ್ರವೇಶ ಅಥವಾ ಶುಲ್ಕ ಪಡೆಯುತ್ತಿರುವುದು ಕಂಡುಬಂದರೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ ಶಾಲಾಡಳಿತ ಮಂಡಳಿಗಳು ಸರಕಾರ ಯಾವ ಕಾರಣಕ್ಕೆ ಈ ರೀತಿಯ ಸೂಚನೆ ನೀಡಿದೆ ಎಂಬುದನ್ನು ಅರ್ಥಮಾಡಿಕೊಂಡಿವೆ ಎಂಬುದನ್ನು ನಂಬಿದ್ದೇನೆ ಎಂದು ಹೇಳಿದ್ದಾರೆ.
Comments are closed.