ಕರ್ನಾಟಕ

ಕೊರೊನಾ ಚುಚ್ಚುಮದ್ದು ಕಂಡು ಹಿಡಿಯುವ ತಂಡದಲ್ಲಿ ಕನ್ನಡಿಗ

Pinterest LinkedIn Tumblr


ಹಾಸನ: ಕೊರೊನಾ ವೈರಸ್‍ಗೆ ವ್ಯಾಕ್ಸಿನ್ ಕಂಡುಹಿಡಿಯುವ ತಂಡದಲ್ಲಿ ಹಾಸನ ಮೂಲದ ವ್ಯಕ್ತಿ ಸ್ಥಾನ ಪಡೆದಿದ್ದಾರೆ.

ಜಿಲ್ಲೆಯ ಅರಕಲಗೂಡು ತಾಲೂಕಿನ ಮಹದೇಶ ಪ್ರಸಾದ್ ಎಂಬವರು ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೊನಾ ವೈರಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಹದೇಶ್ ಜರ್ಮನಿಯಲ್ಲಿ ವಿಜ್ಞಾನಿಯಾಗಿದ್ದರು. ವಿದೇಶದಲ್ಲಿರುವ ವಿಜ್ಞಾನಿಗಳು ಹಿಂದಿರುಗಿ ಎಂಬ ಪ್ರಧಾನಿ ಮೋದಿ ಕರೆ ಮೆರೆಗೆ ಮಹದೇಶ್ ಭಾರತಕ್ಕೆ ಮರಳಿದ್ದರು. ಆದರೆ ಇದೀಗ ಮತ್ತೆ ಅವರು ಬೆಲ್ಜಿಯಂಗೆ ತೆರಳಿದ್ದಾರೆ.

ಮಹದೇಶ್ ಸಂಶೋಧನೆಕ್ಕೆ ಸಂಬಂಧಿಸಿದಂತೆ ಬೆಲ್ಜಿಯಂನಲ್ಲಿ ನೆಲೆಸಿದ್ದಾರೆ. ಯುರೋಪ್ ರಾಷ್ಟ್ರಗಳು ಒಗ್ಗೂಡಿ ಕೊರೊನಾ ವ್ಯಾಕ್ಸಿನ್ ಕಂಡು ಹಿಡಿಯಲು ಹತ್ತು ತಂಡ ರಚಿಸಿದ್ದು, ವಿಶ್ವ ಸಂಸ್ಥೆ ಕೊರೊನಾ ಔಷಧಿ ಹತ್ತು ತಂಡ ರಚಿಸಿತ್ತು. ಈ ತಂಡದಲ್ಲಿ ಹೆಮ್ಮೆಯ ಕನ್ನಡಿಗ ಮಹದೇಶ ಪ್ರಸಾದ್ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ಮಹದೇಶ್ ಪ್ರಸಾದ್ ಕುಟುಂಬಸ್ಥರು ಮೈಸೂರಿನಲ್ಲಿ ವಾಸವಾಗಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಬಯೋಕೆಮಿಸ್ಟ್ರಿ ಪಿಹೆಚ್‍ಡಿ ಸ್ನಾತಕ ಪದವಿಗಳಿಸಿದ ಮೊಟ್ಟ ಮೊದಲ ಕಿರಿಯ ಎಂಬ ಹೆಗ್ಗಳಿಕೆ ಡಾ. ಮಹದೇಶ್ ಪ್ರಸಾದ್ ಅವರಿಗಿದೆ. ಕಿರಿಯ ವಯಸ್ಸಿನಲ್ಲಿಯೇ ಸಾಧನೆಗಾಗಿ ಸತತ 5 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಮತ್ತು ಗೌರವಗಳನ್ನು ಪಡೆದ ಮೊದಲ ಕಿರಿಯ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಮಹದೇಶ್ ಪಾತ್ರರಾಗಿದ್ದಾರೆ.

ಮಹದೇಶ್ 2019ರಲ್ಲಿ ಬೆಲ್ಜಿಯಂ ದೇಶದಲ್ಲಿ ವಿಸಿಟಿಂಗ್ ವೈರಾಲಜಿ ಫೆಲೋಶಿಪ್ ಅವಾರ್ಡ್, 2016ರಲ್ಲಿ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ರೀಸರ್ಚ್ ಬೋರ್ಡ್‍ನಿಂದ ಯಂಗ್ ಸೈಂಟಿಸ್ಟ್ ಅವಾರ್ಡ್, 2012ರಲ್ಲಿ ಸ್ವೀಡನ್ ದೇಶದಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಅವಾರ್ಡ್, 2010ರಲ್ಲಿ ಯುಎಸ್‍ಎ ದೇಶದಿಂದ ಎನ್‍ಐಹೆಚ್ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಅವಾರ್ಡ್, 2009ರಲ್ಲಿ ಜರ್ಮನಿಯಲ್ಲಿ DAAD ಫೆಲೋಶಿಪ್ ಅವಾರ್ಡ್ ಪಡೆದಿದ್ದಾರೆ.

ಜೊತೆಗೆ ಬಯೋಕೆಮಿಸ್ಟ್ರಿ, ವೈರಾಲಜಿ, ಸ್ಟೆಮ್ ಸೆಲ್ ಬಯಾಲಜಿ, ಟ್ಯೂಮರ್ ವೈರಾಲಜಿ, ಕ್ಯಾನ್ಸರ್ ಜೆನೆಟಿಕ್ಸ್, ಸಿಸ್ಟಂ ವ್ಯಾಕ್ಸಿನಾಲಜಿ ಸೇರಿದಂತೆ ಹಲವು ವಿಷಯಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ 16 ಪ್ರಬಂಧಗಳನ್ನು ಮಂಡಿಸಿದ್ದಾರೆ. ಅಲ್ಲದೆ ಸರ್ಟಿಫೈಡ್ ಲ್ಯಾಬ್ ಅನಿಮಲ್ ಎಕ್ಸ್‍ಪರ್ಟ್ ಎಂದು ಯೂರೋಪಿಯನ್ ಕೌನ್ಸಿಲ್ ಮನ್ನಣೆ ನೀಡಿದೆ.

Comments are closed.