ಬೆಂಗಳೂರು: ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ರಾಜ್ಯದ ಮೇಲೂ ಕರಿನೆರಳು ಬೀರಿರುವ ಕೊರೊನಾಗೆ ಈಗಾಗಲೇ 4 ಮಂದಿ ತುತ್ತಾಗಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಸಿಬ್ಬಂದಿ ಸುರಕ್ಷತೆಗಾಗಿ ಹೆಚ್ಚುವರಿ 3 ಸಾವಿರ ಮಾಸ್ಕ್‌ಗಳನ್ನು ವಿತರಣೆ ಮಾಡಿದೆ.
ದಿನೇ ದಿನೇ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದರ ಎಫೆಕ್ಟ್ ಹಂತ ಹಂತವಾಗಿ ಎಲ್ಲಾ ವಲಯಗಳಿಗೂ ಹಬ್ಬುತ್ತಿದ್ದು, ಎಲ್ಲರೂ ಭಯಭೀತರಾಗಿದ್ದಾರೆ. ಸದಾ ಜನರ ಮಧ್ಯೆ ಕೆಲಸ ಮಾಡುವ ಬೆಂಗಳೂರು ನಗರ ಸಂಚಾರಿ ಪೊಲೀಸರು ಮೊದಲಿಗೆ ಈ ಸೋಂಕಿನ ಭೀತಿ ಹಿನ್ನೆಲೆ ಮಾಸ್ಕ್ ನೀಡುವಂತೆ ಹಿರಿಯ ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. ಸಿಬ್ಬಂದಿ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು, ಎಲ್ಲಾ ಕರ್ತವ್ಯ ನಿರತ ಪೊಲೀಸರಿಗೆ ಸೂಕ್ತ ಭದ್ರತೆ ಇರುವ ಮಾಸ್ಕ್‌ಗಳನ್ನು ವಿತರಣೆ ಮಾಡುವಂತೆ ತಿಳಿಸಿ, ತೀರ ಅನಿವಾರ್ಯ ಇರುವವರಿಗೆ ಮಾತ್ರ ಮೊದಲಿಗೆ ಮಾಸ್ಕ್ ವಿತರಿಸಿದ್ದರು.
ಯಾವಾಗ ಕೊರೊನಾ ವೈರಸ್ ಹರಡುತ್ತಿರುವವರ ಸಂಖ್ಯೆ ಹೆಚ್ಚಾಯ್ತೋ ಎಲ್ಲಾ ಟ್ರಾಫಿಕ್ ಮತ್ತು ಸಿವಿಲ್ ಪೊಲೀಸರು ಕೂಡ ನಮಗೂ ಮಾಸ್ಕ್ ಕೊಡಿ ಎಂದು ಒತ್ತಾಯಿಸಿದ್ದರು. ಇದರಿಂದ ಎಚ್ಚುತ್ತ ಪೊಲೀಸ್ ಇಲಾಖೆ ಇಂದು ಹೆಚ್ಚುವರಿಯಾಗಿ 3 ಸಾವಿರ ಮಾಸ್ಕ್‌ಗಳನ್ನು ಇಲಾಖೆ ವತಿಯಿಂದ ಸಿಬ್ಬಂದಿಗೆ ನೀಡಿದ್ದಾರೆ.
ಇದು ಹಂತ ಹಂತವಾಗಿ ಅವಶ್ಯಕತೆ ಇರುವ ಎಲ್ಲಾ ಇಲಾಖೆಗೆ ವಿಸ್ತರಿಸುವ ಸಾಧ್ಯತೆ ಇದ್ದು, ಸದ್ಯಕ್ಕೆ ಪೊಲೀಸರಿಗೆ ಮಾತ್ರ ಮಾಸ್ಕ್‌ಗಳನ್ನು ನೀಡಲಾಗ್ತಿದೆ. ಎಲ್ಲಾ ಸಿವಿಲ್ ಪೊಲೀಸರಿಗೂ ಮಾಸ್ಕ್ ಕಡ್ಡಾಯ ಗೊಳಿಸಿದರೆ ಸಾವಿರಾರು ಸಂಖ್ಯೆಯಲ್ಲಿ ಮಾಸ್ಕ್ ಗಳು ಬೇಕಾಗುತ್ತೆ. ಹೀಗಾಗಿ ಸದ್ಯ ಟ್ರಾಫಿಕ್ ಮತ್ತು ತೀರ ಅವಶ್ಯಕತೆ ಇರುವ ಪೊಲೀಸರಿಗೆ ಮಾತ್ರ ಮಾಸ್ಕ್‌ಗಳನ್ನು ನೀಡಲಾಗುತ್ತಿದೆ.
Comments are closed.