ಕರ್ನಾಟಕ

ಯುವತಿಯೊಂದಿಗೆ ಸ್ವಾಮೀಜಿ ಎಸ್ಕೇಪ್ ಪ್ರಕರಣಕ್ಕೆ ಟ್ವಿಸ್ಟ್

Pinterest LinkedIn Tumblr


ಕೋಲಾರ: ಯುವತಿಯೊಂದಿಗೆ ಎಸ್ಕೇಪ್ ಆಗಿ ಸನ್ಯಾಸಿಯಾಗಿದ್ದ ಸ್ವಾಮೀಜಿ ಸಂಸಾರಿಯಾಗಿ ಪತ್ತೆಯಾಗಿದ್ದು, ಇದೀಗ ಸ್ವಾಮೀಜಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಮಾಜಿ ಸ್ವಾಮೀಜಿಗೆ ಕೈಕೊಟ್ಟು ಇದೀಗ ಉಲ್ಟಾ ಹೊಡೆದಿರುವ ಯುವತಿ ಪೋಷಕರೊಂದಿಗೆ ಸಂಬಂಧಿಕರ ಮನೆಗೆ ಹೋಗಿದ್ದಾಳೆ. ಮಠದಲ್ಲಿರಬೇಕಾಗಿದ್ದ ದತ್ತಾತ್ರೇಯ ಅವಧೂತ ಸ್ವಾಮೀಜಿ ಕೋಲಾರದ ಉಪಕಾರಾಗೃಹಕ್ಕೆ ತೆರಳಿದ್ದಾನೆ.

ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದನು. ಅಲ್ಲದೇ ನನ್ನನ್ನು ವಶೀಕರಣ ಮಾಡಿಕೊಂಡು ತನ್ನ ಜೊತೆ ಕರೆದುಕೊಂಡು ಹೋಗಿದ್ದನು ಎಂದು ಯುವತಿ ಪೊಲೀಸರ ಬಳಿ ಹೇಳಿದ್ದಾಳೆ ಎಂದು ತಿಳಿದುಬಂದಿದೆ. ಹೀಗಾಗಿ ಮಧ್ಯರಾತ್ರಿ ಗೌಪ್ಯ ಸ್ಥಳದಿಂದ ಸ್ವಾಮಿಯನ್ನು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ಸ್ವಾಮೀಜಿಯ ವಿರುದ್ಧ ಪೊಲೀಸರು ಯುವತಿಗೆ ನಂಬಿಸಿ ವಂಚನೆ ಪ್ರಕರಣ ಹಾಗೂ 420 ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ಸ್ವಾಮಿಗೆ ಹಣಕೊಟ್ಟು ವಂಚನೆಗೊಳಗಾದ 9 ಜನರಿಂದ ಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ.

ಏನಿದು ಪ್ರಕರಣ?
ಕಳೆದ ಫೆ.27 ರಂದು ಕೋಲಾರ ತಾಲೂಕಿನ ಹೊಳಲಿ ಗ್ರಾಮದಿಂದ ಯುವತಿಯೊಂದಿಗೆ ಸ್ವಾಮೀಜಿ ನಾಪತ್ತೆಯಾಗಿದ್ದ. ದತ್ತಾತ್ರೇಯ ಅವಧೂತ ಸ್ವಾಮಿ ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿಯಾಗಿ ಘೋಷಣೆ ಮಾಡಿಕೊಂಡಿದ್ದ. ನಂತರ ಅದೇ ಗ್ರಾಮದ 20 ವರ್ಷದ ಯುವತಿಯೊಂದಿಗೆ ಪರಾರಿಯಾಗಿದ್ದ. ಈ ಹಿನ್ನೆಲೆ ಯುವತಿಯ ಪೋಷಕರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಅಲ್ಲದೆ ಆತನ ಹುಡುಕಾಟ ಗ್ರಾಮಾಂತರ ಠಾಣಾ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ನಂತರ ಈತನ ಹೆಸರು ರಾಘವೇಂದ್ರ ಎಂಬ ಮಾಹಿತಿಯನ್ನ ಪೊಲೀಸರು ಕಲೆಹಾಕಿದ್ದರು. ನಂತರ ಪೊಲೀಸರಿಗೆ ಮಂಗಳೂರು ಬಳಿ ಯುವತಿಯೊಂದಿಗೆ ಸ್ವಾಮೀಜಿ ಸಿಕ್ಕಿಬಿದ್ದಿದ್ದನು. ಸ್ವಾಮೀಜಿ ಪೊಲೀಸರ ಅತಿಥಿಯಾಗುತ್ತಿದ್ದಂತೆ ಸ್ವಾಮೀಜಿಯ ಟಿಕ್ ಟಾಕ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Comments are closed.