ಕರ್ನಾಟಕ

ಆಟೋ ಡ್ರೈವರ್ ಕೊಲೆಗೆ ಹೆಂಡತಿಯ ಅನೈತಿಕ ಸಂಬಂಧವೇ ಕಾರಣ?

Pinterest LinkedIn Tumblr


ಬೆಂಗಳೂರು: ಶ್ಯಾಂಪುರ ರೈಲ್ವೆ ಗೇಟ್‌ ಬಳಿ ಹಾಡಹಗಲೇ ನಡೆದಿದ್ದ ಆಟೋ ಚಾಲಕನ ಕೊಲೆ ಪ್ರಕರಣವನ್ನು ಭೇದಿಸಿರುವ ಡಿ.ಜೆ. ಹಳ್ಳಿ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಶಾಖಪಟ್ಟಣ ಮೂಲದ ಜೈರಾಜ್‌ ಮತ್ತು ನಾರಾಯಣಗೌಡ ಬಂಧಿತರು. ಫೆ.26ರಂದು ಬೆಳಗ್ಗೆ 9.15ರ ಸುಮಾರಿಗೆ ಚಾಲಕ ವಿನೋದ್‌(32) ಎಂಬುವರನ್ನು ಚಲಿಸುತ್ತಿದ್ದ ಆಟೋದಲ್ಲೇ ಕತ್ತು ಸೀಳಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣದಲ್ಲಿ ಚಾಲಕ ವಿನೋದ್‌ ಪತ್ನಿ ಪಾತ್ರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದರು.

ವಿನೋದ್‌ ಮತ್ತು ಅನಿತಾ ನಡುವೆ 12 ವರ್ಷಗಳ ಹಿಂದೆ ಮದುವೆ ನಡೆದಿತ್ತು. ಇವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆದರೆ, ಕೌಟುಂಬಿಕ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಹೀಗಾಗಿ, ಪತಿಯನ್ನು ತೊರೆದು ಪತ್ನಿ ತವರು ಸೇರಿದ್ದಳು. ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದ ಅನಿತಾ, ತವರು ತೊರೆದು ನಾರಾಯಣಗೌಡನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಆರೋಪಿಸಲಾಗಿದೆ.

ಈ ವಿಚಾರ ತಿಳಿದ ವಿನೋದ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ವಿಚಾರದಿಂದ ಕುಪಿತಗೊಂಡಿದ್ದ ನಾರಾಯಣಗೌಡ, ವಿನೋದ್‌ನನ್ನು ಮುಗಿಸಲು ಜೈರಾಜ್‌ಗೆ 1 ಲಕ್ಷ ರೂ.ಗೆ ಸುಪಾರಿ ನೀಡಿದ್ದ.

ಫೆಬ್ರವರಿ 26ರಂದು ವಿನೋದನ ಆಟೋ ನಿಲ್ಲಿಸಿದ ಜೈರಾಜ್‌, ಬಾಡಿಗೆಗೆ ಬನ್ನಿ ಎಂದು ಆಟೋ ಹತ್ತಿದ್ದ. ಅದೇ ಆಟೋವನ್ನು ಬೈಕ್‌ನಲ್ಲಿ ನಾರಾಯಣಗೌಡ ಹಿಂಬಾಲಿಸಿದ್ದ. ಶ್ಯಾಂಪುರ ರೈಲ್ವೆ ಗೇಟ್‌ ಬಳಿ ವಿನೋದನ ಕತ್ತು ಸೀಳಿದ ಜೈರಾಜ್‌, ಹಿಂದೆ ಬರುತ್ತಿದ್ದ ನಾರಾಯಣಗೌಡನ ಬೈಕ್‌ನಲ್ಲಿ ಪರಾರಿಯಾಗಿದ್ದ.

ಈ ಘಟನೆಯನ್ನು ಮತ್ತೊಂದು ಆಟೋದಲ್ಲಿ ತೆರಳುತ್ತಿದ್ದ ವಿನೋದನ ಸಹೋದರ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅನಿತಾ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.