ಕರ್ನಾಟಕ

ಚಿಕ್ಕಮಗಳೂರು ಉತ್ಸವದಲ್ಲಿ ಕುಟುಂಬದೊಂದಿಗೆ ಸಿ.ಟಿ. ರವಿ ನೃತ್ಯ

Pinterest LinkedIn Tumblr


ಚಿಕ್ಕಮಗಳೂರು (ಮಾ. 1): 2 ದಶಕಗಳ ನಂತರ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದ ‘ಚಿಕ್ಕಮಗಳೂರು ಉತ್ಸವ’ದಲ್ಲಿ ಇಡೀ ಜಿಲ್ಲೆಯ ಜನರು ಪಾಲ್ಗೊಂಡು ಸಂಭ್ರಮಿಸಿದರು. ಕೇವಲ ಸಾರ್ವಜನಿಕರು ಮಾತ್ರವಲ್ಲದೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಕೂಡ ತಮ್ಮ ಹೆಂಡತಿ, ಮಕ್ಕಳೊಂದಿಗೆ ವೇದಿಕೆ ಮುಂದೆ ಕುಣಿದು ಕುಪ್ಪಳಿಸಿದರು.

ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಜಿಲ್ಲಾ ಉತ್ಸವದ ಮೊದಲನೇ ದಿನ ಸಚಿವ ಸಿ.ಟಿ. ರವಿ ಮಾತ್ರ ಕುಣಿದಿದ್ದರು. ಎರಡನೇ ದಿನವಾದ ಶನಿವಾರ ಸಚಿವ ಸಿ.ಟಿ. ರವಿ, ಹೆಂಡತಿ ಪಲ್ಲವಿ ಹಾಗೂ ಮಕ್ಕಳ ಸಮೇತ ವೇದಿಕೆ ಮುಂಭಾಗ ಕುಣಿದು ಕುಪ್ಪಳಿಸಿದ್ದಾರೆ. ‘ದೂರದಿಂದ ಬಂದಂಥ ಸುಂದರಾಂಗ ಜಾಣ’ ಹಾಡಿಗೆ ಹೆಂಡತಿಯ ಜೊತೆಗೆ ವೇದಿಕೆಯ ಎದುರು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಸಿ.ಟಿ. ರವಿ ಕುಣಿಯೋದನ್ನು ಕಂಡು ವೇದಿಕೆ ಮುಂಭಾಗ ಇದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಕೂಡ ಸಿ.ಟಿ. ರವಿ ಜೊತೆ ಕುಣಿದು ಕುಪ್ಪಳಿಸಿದ್ದಾರೆ.

2-3 ಹಾಡಿಗೆ ಕುಣಿದ ಸಿ.ಟಿ. ರವಿ ನಂತರ ಸುಸ್ತಾಗಿ ಹೆಂಡತಿಯ ಜೊತೆ ಹೋಗಿ ಕುಳಿತುಕೊಂಡರು. ಆದರೆ, ಉತ್ಸವದ ಸಂಭ್ರಮವನ್ನು ಅನುಭವಿಸುತ್ತಿದ್ದ ಜನರು ಮನಸೋ ಇಚ್ಛೆ ಕುಣಿದರು. ಎರಡು ದಶಕಗಳ ಬಳಿಕ ಚಿಕ್ಕಮಗಳೂರು ಉತ್ಸವ ನಡೆಯುತ್ತಿರುವುದರಿಂದ ಕಾಫಿನಾಡಿಗರ ಮನೆ-ಮನದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿದೆ. ದಿನನಿತ್ಯ 15 ಸಾವಿರಕ್ಕೂ ಅಧಿಕ ಜನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಹಾಡು-ನೃತ್ಯಗಳಿಗೆ ಕುಣಿದು-ಕುಪ್ಪಳಿಸಿ ಸಂತೋಷ ಪಡುತ್ತಿದ್ದಾರೆ.

ಚಿಕ್ಕಮಗಳೂರಿನ ಝಗಮಗಿಸೋ ಕಲರ್ ಫುಲ್ ವೇದಿಕೆಯಲ್ಲಿ ಹಿನ್ನೆಲೆ ಗಾಯಕರ ದಂಡೇ ಕಾಫಿನಾಡಲ್ಲಿ ಪ್ರತ್ಯಕ್ಷವಾಗಿತ್ತು. ಕಲಾವತಿಯವರ ‘ಕೋಳಿಕೆ ರಂಗ’ ಕಾಫಿನಾಡಿನಲ್ಲಿ ಹೈವೋಲ್ಟೇಜ್ ಪವರ್ ಹೊತ್ತಿಸಿದರೆ, ಅಜಯ್ ವಾರಿಯರ್-ಜೋಗಿ ಸುನೀತಾ ಜುಗಲ್ ಬಂಧಿಯ ‘ಚಿಕ್ಕಮಗಳೂರ ಚಿಕ್ಕಮಲ್ಲಿಗೆ’ ಹಾಡು ಕಾಫಿನಾಡ ಮಂದಿಯನ್ನ ಆಕರ್ಷಿಸಿತು. ಯುವಗಾಯಕಿ ಐರಾ ಹಾಡಿದ ‘ಜೋಕೆ, ನಾನು ಬಳ್ಳಿಯ ಮಿಂಚು’ ಹಾಡು ಯುವಕರ ಎದೆಬಡಿತ ಹೆಚ್ಚಿಸಿತು. ಇವಿಷ್ಟೇ ಅಲ್ಲದೆ, ‘ಬುಲ್ ಬುಲ್ ಮಾತಾಡಕಿಲ್ವಾ?’ ಸಾಂಗ್ ಕೂಡ ಹೇಮಂತ್- ಶಮಿತಾ ಮಲ್ನಾಡ್ ಕಂಠದಲ್ಲಿ ಸಖತ್ತಾಗಿ ಮೂಡಿಬಂದಿತು. ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಕೂಡ ಜಾನಪದ ಹಾಡಿಗೆ ದನಿಯಾದರು.

Comments are closed.