ಹಾವೇರಿ: ಮದುವೆಯಾಗಿರುವ ಮಹಿಳೆ ಜೊತೆ ಅಕ್ರಮವಾಗಿ ಫೋನಿನಲ್ಲಿ ಮಾತನಾಡುತ್ತಿದ್ದ ಯುವಕನನ್ನು ಕೊಲೆ ಮಾಡಿರುವ ಆರೋಪ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಣಸೀಕಟ್ಟಿ ಗ್ರಾಮದಲ್ಲಿ ಕೇಳಿ ಬಂದಿದೆ.
ಗ್ರಾಮದ ಚನ್ನವ್ವ ಮತ್ತು ಶಿವಪ್ಪ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಅದರಲ್ಲಿ ಅಣ್ಣಪ್ಪ ಕಲ್ಲಾಪುರ ಹಿರಿಯ ಮಗ. ಹಿರಿಯ ಮಗ ಅಣ್ಣಪ್ಪ ಮನೆಗಳಿಗೆ ಟೈಲ್ಸ್ ಹಾಕುವ ಕೆಲಸ ಮಾಡಿಕೊಂಡಿದ್ದನು. ಮಾವನ ಬಳಿ ಕೆಲಸ ಮಾಡಿಕೊಂಡಿದ್ದ ಪ್ರಶಾಂತ್ ಕೆಲವು ವರ್ಷಗಳ ಕಾಲ ಕುಮಟಾದಲ್ಲಿ ಕೆಲಸ ಮಾಡಿ, ಎರಡು ವರ್ಷಗಳಿಂದ ಊರಲ್ಲಿದ್ದ. ಹೀಗಿದ್ದ ಅಣ್ಣಪ್ಪ ಫೆ. 21ರಂದು ರಾತ್ರಿ ಮನೆಯಿಂದ ಹೋಗಿದ್ದಾನೆ. ಹೋಗುವಾಗ ತಮ್ಮನಿಗೆ ತನ್ನ ಮೊಬೈಲ್ ಕೊಟ್ಟು ಸಿಮ್ ಕಾರ್ಡ್ ಮಾತ್ರ ತೆಗೆದುಕೊಂಡು ಹೋಗಿದ್ದನು.
ಮನೆಯಿಂದ ಹೊರಹೋಗಿದ್ದ ಅಣ್ಣಪ್ಪ ಎರಡು ದಿನಗಳ ಕಾಲ ಮನೆಗೆ ವಾಪಸ್ ಆಗಿರಲಿಲ್ಲ. ಹೀಗಾಗಿ ಮನೆಯವರು ಗಾಬರಿಗೊಂಡಿದ್ದರು. ಆದರೆ ಎರಡು ದಿನಗಳ ನಂತರ ಗ್ರಾಮದ ಬಳಿ ಇರುವ ಬೆಳವತ್ತಿ ಕೆರೆಯಲ್ಲಿ ಅಣ್ಣಪ್ಪನ ಶವ ಪತ್ತೆಯಾಗಿದೆ. ಜಮೀನಿಗೆ ತೆರಳುವ ಕೆರೆಯ ಅಕ್ಕಪಕ್ಕದ ರೈತರೊಬ್ಬರು ಶವ ನೋಡಿ ಊರಲ್ಲಿ ಹೇಳಿದ್ದಾರೆ. ಆಗ ಅಣ್ಣಪ್ಪನ ಮನೆಯವರು ಕೆರೆಯ ಬಳಿ ಧಾವಿಸಿ ಮೃತದೇಹವನ್ನು ನೋಡಿದ್ದಾರೆ. ಅದು ಅಣ್ಣಪ್ಪನದ್ದೇ ಎನ್ನುವುದು ಗೊತ್ತಾಗಿದೆ. ಆದರೆ ಅಣ್ಣಪ್ಪನ ಕೈಕಾಲು ಕಟ್ಟಿಹಾಕಿ ಯಾರೋ ಹೊಡೆದು ಹತ್ಯೆ ಮಾಡಿ ಕೆರೆಗೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಂತ ಅಣ್ಣಪ್ಪನ ಸಹೋದರ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಹತ್ಯೆಯಾಗಿರುವ ಅಣ್ಣಪ್ಪ ಅದೇ ಗ್ರಾಮದ ಯುವತಿಯೊಬ್ಬಳ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದನು ಎನ್ನಲಾಗಿದೆ. ಯುವತಿ ಮನೆಯವರು ಒಂದು ಬಾರಿ ಕರೆದು ಅಣ್ಣಪ್ಪನ ಜೊತೆ ಮಾತನಾಡಿ ರಾಜಿ ಪಂಚಾಯ್ತಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಇದೆಲ್ಲವೂ ಆತನ ತಾಯಿಗೆ ಗೊತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಕೆಲವೇ ಕೆಲವು ದಿನಗಳ ಹಿಂದಷ್ಟೇ ಅಣ್ಣಪ್ಪ ಫೋನಿನಲ್ಲಿ ಮಾತನಾಡ್ತಿದ್ದ ಯುವತಿಗೆ ಬೇರೊಬ್ಬ ಯುವಕನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದ್ರೂ ಅಣ್ಣಪ್ಪ ಮತ್ತು ಯುವತಿ ನಡುವಿನ ಫೋನ್ ಸಂಭಾಷಣೆ ಮಾತ್ರ ನಿಲ್ಲಿಸಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಯುವತಿ ಕಡೆಯವರೆ ಅಣ್ಣಪ್ಪನನ್ನ ಹತ್ಯೆ ಮಾಡಿ ಕೈ-ಕಾಲು ಕಟ್ಟಿ ಹಾಕಿ ಕೆರೆಗೆ ಎಸೆದು ಹೋಗಿದ್ದಾರೆ ಎಂದು ಅಣ್ಣಪ್ಪನ ಮನೆಯವರು ಆರೋಪಿಸುತ್ತಿದ್ದಾರೆ.
ಅಣ್ಣಪ್ಪನನ್ನು ಯಾರೋ ದುಷ್ಕರ್ಮಿಗಳು ಹತ್ಯೆ ಮಾಡಿ ಕೈ-ಕಾಲು ಕಟ್ಟಿ ಹಾಕಿ ಕೆರೆಗೆ ಎಸೆದು ಹೋಗಿದ್ದಾರೆ ಎಂದು ಅಣ್ಣಪ್ಪನ ಮನೆಯವರು ಹಾನಗಲ್ ಪೊಲೀಸ್ ಠಾಣೆಯಲ್ಲಿ ಮೃತದೇಹ ಪತ್ತೆಯಾದ ದಿನ ಎಂದರೆ ಫೆ. 23ರಂದು ಪ್ರಕರಣ ದಾಖಲಿಸಿದ್ದಾರೆ. ಆದರೆ ಪ್ರಕರಣ ದಾಖಲಾಗಿ ಆರು ದಿನಗಳು ಕಳೆದ್ರೂ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿಲ್ಲ. ಇವರೆಗೂ ಆರೋಪಿಗಳನ್ನು ಪತ್ತೆ ಮಾಡಿಲ್ಲ. ಆದರೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳನ್ನ ಕೇಳಿದ್ರೆ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.
Comments are closed.