ಕರ್ನಾಟಕ

ವಾರದಲ್ಲಿ ಬಿಜೆಪಿಯ 32 ಶಾಸಕರು ರಾಜೀನಾಮೆ?: ಸಿ.ಎಂ. ಇಬ್ರಾಹಿಂ

Pinterest LinkedIn Tumblr


ವಿಜಯಪುರ(ಫೆ. 23): ಅಸಮಾಧಾನಿತರೆಂಬ ತೂಗುಗತ್ತಿಯನ್ನಿಟ್ಟುಕೊಂಡು ಸಾಗುತ್ತಿರುವ ಬಿಎಸ್​ವೈ ಸರ್ಕಾರ ಅಪಾಯಕಾರಿ ಹಾದಿಯಲ್ಲಿ ಮುಂದುವರಿಯುತ್ತಿರುವುದು ರಾಜ್ಯದ ಜನರು ನೋಡುತ್ತಿದ್ದಾರೆ. ಮೂಲ ಬಿಜೆಪಿಗರು, ವಲಸಿಗರು ಎಂಬ ಬಣಗಳಿಂದ ಸಿಎಂ ಹೈರಾಣಗೊಂಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ 17 ಶಾಸಕರನ್ನು ಸೆಳೆದು ಸರ್ಕಾರ ರಚನೆ ಮಾಡಿದ್ದ ಯಡಿಯೂರಪ್ಪ ಈಗ ಬಂಡಾಯದ ಬೇಗುದಿಯಲ್ಲಿ ಬೇಯುತ್ತಿದ್ಧಾರೆ. ಈ ಹೊತ್ತಿನಲ್ಲೇ ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೊಸ ಬಾಂಬ್ ಸಿಡಿಸಿದ್ಧಾರೆ. ಬಿಜೆಪಿಯ 32 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಇಬ್ರಾಹಿಂ ಹೇಳಿದ್ಧಾರೆ.

ನಿಡಗುಂದಿ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿ.ಎಂ. ಇಬ್ರಾಹಿಮ್, ಬಿಜೆಪಿಯ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದು ಒಂದು ವಾರದಲ್ಲಿ ಸ್ಪಷ್ಟವಾಗಲಿದೆ ಎಂದು ಶಾಕಿಂಗ್ ಸುದ್ದಿ ನೀಡಿದ್ಧಾರೆ.

ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಇಬ್ರಾಹಿಂ, ಬಸ್ ಸ್ಟ್ಯಾಂಡ್​ನಲ್ಲಿ ಮದುವೆಯಾದಂತೆ ಇವರು ಬಿಜೆಪಿ ಸೇರಿದ್ಧಾರೆ. ಬೇರೆ ಬಸ್ ಬಂದ ತತ್​ಕ್ಷಣ ಹತ್ತಿ ಹೋಗುತ್ತಾರೆ ಎಂದು ಕಿಚಾಯಿಸಿದ್ಧಾರೆ.

ಕೆಲ ದಿನಗಳ ಹಿಂದೆ ಯಡಿಯೂರಪ್ಪ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದ ಇಬ್ರಾಹಿಂ ಇವತ್ತೂ ಮೃದು ಧೋರಣೆ ಮುಂದುವರಿಸಿದ್ಧಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿಕೊಳ್ಳುವ ಯಾವ ಮನವಿಗೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯಕ್ಕೆ ಬರಬೇಕಿದ್ದ 35 ಸಾವಿರ ಕೊಟಿ ರೂ ಖೋತಾ ಆಗಿದೆ. ಮದುವೆ ಮಾಡಿ ಪ್ರಸ್ಥಕ್ಕೆ ಅವಕಾಶ ಸಿಗದ ಸ್ಥಿತಿ ಯಡಿಯೂರಪ್ಪದ್ದಾಗಿದೆ. ಯಡಿಯೂರಪ್ಪ ಲಿಂಗಾಯತರಾಗಿ ಹುಟ್ಟಿದ್ದೇ ತಪ್ಪಾದಂತಾಗಿದೆ. ಯಡಿಯೂರಪ್ಪ ಮೇಲೆ ಸಿಟ್ಟಿದ್ದರೆ ಕರ್ನಾಟಕದ ಮೇಲೆ ಯಾಕೆ ಮುಯ್ಯಿ ತೀರಿಸಿಕೊಳ್ಳಬೇಕು? ಎಂದು ಪ್ರಶ್ನಿಸಿದ ಇಬ್ರಾಹಿಂ, ದೆಹಲಿ ಮಾದರಿಯಲ್ಲಿ ರಾಜ್ಯದ ಜನತೆ ತೀರ್ಪು ನೀಡಬೇಕಿದೆ ಎಂದು ಕರೆ ನೀಡಿದ್ಧಾರೆ.

ಇನ್ನು, ಕೇಂದ್ರ ಸರ್ಕಾರದ ನೀತಿಗಳನ್ನು ಮತ್ತು ಕ್ರಮಗಳನ್ನು ಇಬ್ರಾಹಿಂ ತಮ್ಮದೇ ಮೊನಚು ಶೈಲಿಯಲ್ಲಿ ಟೀಕಿಸಿದ್ದಾರೆ. ಕೆಲಸವಿಲ್ಲದ ಹುಚ್ಚನಿಗೆ ಮಗಳನ್ನು ಕೊಟ್ಟರೆ ಆತ ಮಾವನ ಆಸ್ತಿಯನ್ನೇ ಮಾರಿದನಂತೆ. ಅದೇ ರೀತಿ ಕೇಂದ್ರ ಸರ್ಕಾರವು ಎಲ್​ಐಸಿ, ರೈಲ್ವೆ ಇಲಾಖೆ ಮತ್ತು ಹೆಚ್​ಪಿ(ಹಿಂದೂಸ್ಥಾನ್ ಪೆಟ್ರೋಲಿಯಂ) ಸಂಸ್ಥೆಗಳನ್ನು ಮಾರಾಟ ಮಾಡುತ್ತಿದೆ. ದೇಶದ ಆಸ್ತಿಯನ್ನು ಗುಜರಾತಿಗಳು ಹೊಡೆದುಕೊಂಡು ಹೋಗುತ್ತಿದ್ಧಾರೆ ಎಂದು ಮಾಜಿ ಸಚಿವರೂ ಆದ ಸಿ.ಎಂ. ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

Comments are closed.