ಕರ್ನಾಟಕ

ಪಕ್ಷದಲ್ಲಿನ ಬಂಡಾಯದ ಭೀತಿಯಲ್ಲಿ ಯಡಿಯೂರಪ್ಪ; ಅತೃಪ್ತರ ಸಭೆಗಳ ಕುರಿತು ಮಾಹಿತಿ ನೀಡುವಂತೆ ಗುಪ್ತಚರ ಇಲಾಖೆಗೆ ಸೂಚನೆ ನೀಡಿದ ಸಿಎಂ !

Pinterest LinkedIn Tumblr

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಅತೃಪ್ತರ ನಾಯಕರ ಬಂಡಾಯವು ಸಿಎಂ ಬಿಎಸ್​ ಯಡಿಯೂರಪ್ಪ ಅವರಿಗೆ ತಲೆನೋವು ತಂದಿದೆ. ವಲಸಿಗ ಶಾಸಕರಿಗೆ ಮಾತ್ರ ಬಿಎಸ್​ವೈ ಮನ್ನಣೆ ಹಾಕುತ್ತಿದ್ದು, ಮೂಲ ಬಿಜೆಪಿಗರನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಜಗದೀಶ್​ ಶೆಟ್ಟರ್​, ಉಮೇಶ್​ ಕತ್ತಿ ನಡೆಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು, ಅವರ ಸಭೆಗಳು ಪಕ್ಷದಲ್ಲಿ ಕುತೂಹಲ ಕೂಡ ಕೆರಳಿಸಿದೆ. ಮೂಲ ಬಿಜೆಪಿಗರ ಅಸಮಾಧಾನದಿಂದ ಸರ್ಕಾರಕ್ಕೆ ಹಾನಿಯಾಗುವ ಸಾಧ್ಯತೆ ಇದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸಿಎಂ ಈ ಸಭೆಗಳ ಕುರಿತು ಮಾಹಿತಿ ನೀಡುವಂತೆ ಗುಪ್ತಚರ ಇಲಾಖೆಗೆ ಸೂಚನೆ ನೀಡಿದ್ದಾರೆ.

ಕಳೆದ ವಾರ ಜಗದೀಶ್​ ಶೆಟ್ಟರ್​ ಮನೆಯಲ್ಲಿ ಬಿಎಸ್​ವೈ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ 20 ಕ್ಕೂ ಅಧಿಕ ನಾಯಕರು ಸಭೆ ನಡೆಸಿದ್ದರು. ಈ ಸಭೆ ಬಿಜೆಪಿ ವಲಯದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಈ ಬಗ್ಗೆ ಸಿಎಂ ಕೂಡ ವರದಿ ಕೇಳಿದ್ದರು. ಆ ರೀತಿಯ ಚಟುವಟಿಕೆಗಳು ನಡೆದಿಲ್ಲ. ಇದು ಮಾಧ್ಯಮಗಳ ಊಹಾಪೋಹ ಎಂದು ಶೆಟ್ಟರ್​ ತಿಳಿಸಿದ್ದರು.

ಇದಾದ ಬಳಿಕ ವಿಧಾನ ಸಭೆ ಅಧಿವೇಶನದ ಸಮಯದಲ್ಲಿಯೇ ಉಮೇಶ್​ ಕತ್ತಿ ಮತ್ತವರ ಆಪ್ತರು ಎಚ್​ಡಿ ಕುಮಾರಸ್ವಾಮಿಯನ್ನು ಭೇಟಿಯಾಗುವ ಮೂಲ ಅಚ್ಚರಿ ಮೂಡಿಸಿದರು. ಇದು ಸೌಹರ್ದ ಭೇಟಿ ಎಂದರೂ ಕೂಡ ಸಚಿವ ಸ್ಥಾನ ವಂಚಿತರಾದ ಕತ್ತಿ ಬಿಎಸ್​ ಯಡಿಯೂರಪ್ಪ ವಿರುದ್ಧ ಬಂಡಾಯವೆದ್ದಿದ್ದಾರೆ ಎಂಬ ಮಾತು ಪಕ್ಷದಲ್ಲಿ ಕೇಳಿಬಂದಿತ್ತು.

ಅಷ್ಟೇ ಅಲ್ಲದೇ ಸಚಿವ ಸ್ಥಾನ ಕೈ ತಪ್ಪಿದ ಮೂಲ ಬಿಜೆಪಿ ಅತೃಪ್ತ ನಾಯಕರ ಗುಂಪು ಬಿಎಲ್​ ಸಂತೋಷ್​ ಮುಂದೆ ದೂರು ನೀಡಿದ್ದು, ಬಿಎಸ್​ ಯಡಿಯೂರಪ್ಪ ಹಾಗೂ ಅವರ ಮಕ್ಕಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈ ಎಲ್ಲಾ ಪಕ್ಷದ ಚಟುವಟಿಕೆಗಳು ಸಿಎಂ ಗಮನಕ್ಕೆ ಬಾರದೇ ಏನಿಲ್ಲ. ಅತೃಪ್ತರ ನಿರಂತರ ಸಭೆಗಳು ತಮಗೆ ಉರುಳಾಗುವ ಸಾಧ್ಯತೆ ಅರಿತ ಸಿಎಂ ಈಗ ಎಚ್ಚೆತ್ತಿದ್ದಾರೆ. ಯಾರು ಎಲ್ಲಿ, ಯಾವಾಗ ಸಭೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿಸುವಂತೆ ಗುಪ್ತಚರ ಇಲಾಖೆಗೆ ಸೂಚನೆ ನೀಡಿದ್ದಾರೆ.

ಸಂಜೆಯಾಗುತ್ತಿದ್ದಂತೆ ಪಂಚತಾರಾ ಹೋಟೆಲ್​ಗಳಲ್ಲಿ ಸಭೆ ಸೇರುತ್ತಿರುವ ನಾಯಕರ ಹಿಂದಿನ ಉದ್ದೇಶ ಏನು ಎಂಬುದನ್ನು ಪತ್ತೆ ಹಚ್ಚುವಂತೆ ತಿಳಿಸಿದ್ದಾರೆ. ಅಲ್ಲದೇ ಅತೃಪ್ತರ ಸಭೆಯಲ್ಲಿ ಯಾರೆಲ್ಲಾ ಇದ್ದಾರೆ, ಸಭೆಯ ಅಜೆಂಡಾ ಏನು, ಎಷ್ಟು ಸಮಯ ಸಭೆ ನಡೆಸಿದರು, ಎಲ್ಲಿ ಸಭೆ ನಡೆಯಿತು. ಯಾರ ನೇತೃತ್ವದಲ್ಲಿ ಸಭೆ ನಡೆದಿದೆ ಎಂಬಿತ್ಯಾದಿ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

Comments are closed.