ಕರ್ನಾಟಕ

CAA ವಿರುದ್ಧದ ಪ್ರತಿಭಟನೆ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಯುವತಿಯನ್ನು ಹೊರದಬ್ಬಿದ ಸಂಘಟಕರು; ವಶಕ್ಕೆ ಪಡೆದು ಕರೆದೊಯ್ದ ಪೊಲೀಸರು

Pinterest LinkedIn Tumblr

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್ಆರ್_ಸಿ (National Register of Citizens) ವಿರೋಧಿ ಕಾರ್ಯಕ್ರಮದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಯುವತಿಯೋರ್ವಳನ್ನು ಸಂಘಟಕರೇ ಹೊರದಬ್ಬಿದ್ದು, ಬಳಿಕ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಎಂಐಎಂ ಮುಖ್ಯಸ್ಥ ಆಸಾದುದ್ದೀನ್ ಓವೈಸಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದು, ಈ ವೇಳೆ ವೇದಿಕೆಯಲ್ಲೇ ಯುವತಿಯೊಬ್ಬಳು ಪಾಕಿಸ್ತಾನ ಜಿಂದಾಬಾದ್ ಎಂದು ಪಾಕ್ ಪರ ಜೈಕಾರ ಕೂಗಿದ್ದಾಳೆ. ಈ ವೇಳೆ ಆಸಾದುದ್ದೀನ್ ಓವೈಸಿ ಸೇರಿದಂತೆ ವೇದಿಕೆ ಮೇಲಿದ್ದ ಗಣ್ಯರು ಆಕೆಯ ಕೈಯಲ್ಲಿದ್ದ ಮೈಕ್ ಎಳೆದು, ಬಲವಂತವಾಗಿ ವೇದಿಕೆಯಿಂದ ಕೆಳಗಿಳಿಸಿದರು. ಈ ವೇಳೆ ಅಲ್ಲೇ ಇದ್ದ ಪೊಲೀಸರು ಆಕೆಯನ್ನು ತಮ್ಮ ವಶಕ್ಕೆ ಪಡೆದರು.

ಪಾಕಿಸ್ತಾನಕ್ಕೆ ಜಿಂದಾಬಾದ್‌ ಎಂದು ಕೂಗಿರುವುದು ಸರಿಯಲ್ಲ. ಆಯೋಜಕರಿಗೂ, ಘೋಷಣೆ ಕೂಗಿರುವ ಯುವತಿಗೂ ಸಂಬಂಧವಿಲ್ಲ ಎಂದು ಹೇಳಲಾಗಿದೆ. ನಮ್ಮ ಶತ್ರು ರಾಷ್ಟ್ರವನ್ನು ಹೊಗಳಿರುವುದು ತಪ್ಪು. ಹಿಂದೂ-ಮುಸ್ಲಿಮರು ಒಂದಾಗಿದ್ದೇವೆ. ನಾವೆಲ್ಲರೂ ಭಾರತೀಯರು ಎಂದು ಹೇಳಿ ಓವೈಸಿ ಮಾತು ನಿಲ್ಲಿಸಿದರು.

ವೇದಿಕೆ ಮೇಲೆ ಬಂದ ಚಿಕ್ಕಮಗಳೂರಿನ ಕೊಪ್ಪ ಮೂಲದ ಯುವತಿ ಅಮೂಲ್ಯ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿದ್ದು, ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಆಕೆಯನ್ನು ತಡೆದಿದ್ದಾರೆ. ಬಳಿಕ ಪೊಲೀಸರು ಕೂಡಲೇ ಅಮೂಲ್ಯಳನ್ನು ವೇದಿಕೆಯಿಂದ ಕರೆದುಕೊಂಡು ವಶಕ್ಕೆ ಪಡೆದಿದ್ದಾರೆ. ಅಮೂಲ್ಯ ಪಾಕಿಸ್ತಾನಕ್ಕೆ ಜೈಕಾರ ಕೂಗುತ್ತಿದ್ದಂತೆ ಓವೈಸಿ ಗೊಂದಲಗೊಂಡರು. ತಕ್ಷಣ ಸಂಘಟಕರು ಮೈಕ್ ಕಿತ್ತುಕೊಂಡು ಅಮೂಲ್ಯ ಅವರನ್ನು ತಡೆದಿದ್ದಾರೆ.

ಈ ಘಟನೆ ಕಾರ್ಯಕ್ರಮ ಆಯೋಜಕರಲ್ಲಿ ಕೆಲ ಕಾಲ ಗೊಂದಲ ಮೂಡುವಂತೆ ಮಾಡಿತು. ಇನ್ನು ಪ್ರಸ್ತುತ ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ರಹಸ್ಯ ಪ್ರದೇಶಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಪಾಕ್ ಪರ ಜೈಕಾರ ಕೂಗಿದ ಅಮೂಲ್ಯಳನ್ನು ಉಪ್ಪಾರ್‌ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಆಕೆಯ ವಿರುದ್ಧ ದೇಶದ್ರೋಹ ಪ್ರಕರಣದಡಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಲಾಗುತ್ತಿದೆ. ಐಪಿಸಿ ಸೆಕ್ಷನ್ 124ಎ, 153(ಎ) (ಬಿ) (ಸಿ), 505(2) ಅಡಿ ಕೇಸ್ ದಾಖಲಿಸಿಕೊಳ್ಳುತ್ತಿದ್ದಾರೆ. ಅಮೂಲ್ಯಳ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿಡಿಯೋ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಳ್ಳಲಿದ್ದಾರೆ.

Comments are closed.