ಕರ್ನಾಟಕ

ಹುಬ್ಬಳ್ಳಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳ ಬಿಡುಗಡೆ

Pinterest LinkedIn Tumblr


ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಭಜರಂಗ ದಳ ಕಾರ್ಯಕರ್ತರು ನಗರದ ಗೋಕುಲ ರಸ್ತೆ ಪೊಲೀಸ್ ಠಾಣೆ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಈ ಮಧ್ಯೆ ಇದೇ ರಸ್ತೆಯಲ್ಲಿ ಹೊರಟಿದ್ದ ವಾಹನಗಳನ್ನು ತಡೆದು ವಾಪಸ್ ಕಳುಹಿಸಿದರು. ಹೈಕೋರ್ಟ್ ಜಡ್ಜ್ ಎಸ್ಕಾರ್ಟ್ ವಾಹನ ತಡೆದು ವಾಪಸ್ ಕಳುಹಿಸಿದ ಪ್ರಸಂಗವೂ ಜರುಗಿತು.

ದೇಶದ್ರೋಹಿಗಳನ್ನು ಪೊಲೀಸರು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಪೊಲೀಸ್ ಕಮಿಷನರ್ ಸ್ಥಳಕ್ಕೆ ಬಂದು ಪ್ರಕರಣದ ತನಿಖೆ ಎಲ್ಲಿವರೆಗೆ ನಡೆದಿದೆ ಎಂದು ತಿಳಿಸಬೇಕು ಎಂದು ಪಟ್ಟು ಹಿಡಿದರು.

ಪೊಲೀಸರು ಜಾಮೀನುರಹಿತ ಪ್ರಕರಣ ದಾಖಲಿಸಿದ್ದಾರೆ. ಪೂರಕ ಸಾಕ್ಷ್ಯಾಧಾರ ಇಲ್ಲ ಎಂದು 169 ಕಲಂ ಹಾಕಿ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದಾರೆ. ಬಂಧನ ಮಾಡಿದ್ದೇವೆ ಎಂದ ಪೊಲೀಸ್ ಕಮಿಷನರ್, ಈಗ ಬಿಡುಗಡೆ ಮಾಡಿರುವುದು ಯಾಕಾಗಿ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಅಧಿಕಾರಿಗಳು ಸೂಕ್ತ ಮಾಹಿತಿ ನೀಡುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಪಟ್ಟು ಹಿಡಿದರು.

ಕಾಶ್ಮಿರದ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಬಂದು, ದೇಶಕ್ಕೆ ದ್ರೋಹ ಮಾಡುತ್ತಿದ್ದಾರೆ. ಬಂಧನ ಮಾಡಿದ್ದೇವೆ ಎಂದು, ಇದೀಗ ಬಿಡುಗಡೆ ಮಾಡಿದ್ದೇವೆ ಎನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಇದರ ಹಿಂದೆ ಯಾರೇ ಇದ್ದರೂ ಸುಮ್ಮನೆ ಬಿಡೆವು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಕಮಿಷನರ್ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು.

ಪ್ರತಿಭಟನೆಯ ವಿಡಿಯೋ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ವಿರುದ್ಧವೂ ಪ್ರತಿಭಟನಾಕಾರರು ಹರಿಹಾಯ್ದರು. ವಿಡಿಯೋ ಮಾಡುತ್ತಿದ್ದ ಸಿಬ್ಬಂದಿ ಮೊಬೈಲ್ ಕಸಿದುಕೊಂಡು ಹರಿಹಾಯ್ದರು. ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ಮಾಡಿದರೆ ವಿಡಿಯೋ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments are closed.