ಕರ್ನಾಟಕ

ವಿವಾಹಿತ ಶಿಕ್ಷಕನಿಂದ ಪ್ರೀತಿಯ ದ್ರೋಹ- ಶಿಕ್ಷಕಿ ಆತ್ಮಹತ್ಯೆ

Pinterest LinkedIn Tumblr


ಹಾಸನ: ವಿವಾಹಿತ ಶಿಕ್ಷಕನೋರ್ವ ಪ್ರೀತಿಯ ನಾಟಕವಾಡಿದ ಕಾರಣ ಮೋಸ ಹೋದ ಶಿಕ್ಷಕಿಯೊಬ್ಬರು ವಿಷ ಸೇವಿಸಿ ಆಹ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿಯನ್ನು ರಾಣಿ ಎಂದು ಗುರುತಿಸಲಾಗಿದೆ. ರಾಣಿಯ ಸಹೋದ್ಯೋಗಿ ಧನಂಜಯ್ ಮೋಸ ಮಾಡಿದ ಶಿಕ್ಷಕ. ಈ ಹಿಂದೆಯೇ ಬೇರೆ ಯುವತಿಯ ಜೊತೆ ಮದುವೆಯಾಗಿದ್ದ ಧನಂಜಯ್, ನಾನು ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ರಾಣಿಯನ್ನು ಪ್ರೇಮದ ಬಲೆಗೆ ಬೀಳಿಸಿಕೊಂಡಿದ್ದಾನೆ.

ರಾಣಿ ಮತ್ತು ಧನಂಜಯ್ ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ, ಮಲ್ಲಂದೂರಿನ ಫ್ರೌಢಶಾಲೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ತನಗೆ ಮದುವೆಯಾಗಿರುವುದನ್ನು ಮುಚ್ಚಿಟ್ಟ ಶಿಕ್ಷಕ ಧನಂಜಯ್, ಸಹೋದ್ಯೋಗಿ ಶಿಕ್ಷಕಿ ರಾಣಿ ಜೊತೆ ಪ್ರೀತಿ ನಾಟಕವಾಡಿ ಸಂಬಂಧ ಬೆಳೆಸಿದ್ದ. ಅಲ್ಲದೆ ರಾಣಿಯಿಂದ ಲಕ್ಷಗಟ್ಟಲೆ ಹಣ ಪಡೆದು ವಂಚಿಸಿದ್ದಾನೆ ಎಂದು ಶಿಕ್ಷಕಿ ರಾಣಿ ಸಹೋದರ ರಾಕೇಶ್ ಆರೋಪ ಮಾಡಿದ್ದಾರೆ.

ತದನಂತರ ಶಿಕ್ಷಕಿ ರಾಣಿ ಹಾಸನ ಜಿಲ್ಲೆಗೆ ವರ್ಗಾವಣೆಯಾಗಿದ್ದಾಳೆ. ಈ ವೇಳೆ ರಾಣಿಗೆ ಧನಂಜಯ್ ಮದುವೆ ವಿಚಾರ ತಿಳಿದು ಬಂದಿದೆ. ಆಗ ರಾಣಿ ಮತ್ತು ಧನಂಜಯನ ನಡುವೆ ಜಗಳವಾಗಿದೆ. ಈ ಜಗಳದ ವಿಡಿಯೋ ಕೂಡ ರಾಣಿ ಸಹೋದರ ಬಯಲು ಮಾಡಿದ್ದು, ತನಗಾಗಿರುವ ನೋವನ್ನು ಹೇಳಿಕೊಂಡು ನನ್ನ ಜೀವನ, ನನ್ನ ಮನಸ್ಸನ್ನು ಹಾಳು ಮಾಡಿದೆ ಎಂದು ಮೋಸ ಮಾಡಿದ ಸಹೋದ್ಯೋಗಿ ಶಿಕ್ಷಕನನ್ನು ರಾಣಿ ಬೈದಿದ್ದಾರೆ. ಎಲ್ಲ ದಾಖಲೆಯೊಂದಿಗೆ ನಿನ್ನ ಮನೆಗೆ ಬರುತ್ತೇನೆ, ಎಲ್ಲವನ್ನೂ ಬಯಲು ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದುಕೊಂಡಿದ್ದಾರೆ.

ಇದಾದ ನಂತರ ನೊಂದ ಶಿಕ್ಷಕಿಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಗ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಣಿ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಇತ್ತ ನ್ಯಾಯಕ್ಕಾಗಿ ರಾಣಿ ಸಹೋದರ ಕಾನೂನು ಹೋರಾಟ ಮಾಡುತ್ತಿದ್ದಾರೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರೇ ತನ್ನ ತಂಗಿ ಸಾವಿಗೆ ಕಾರಣವಾದ ಶಿಕ್ಷಕ ಧನಂಜಂಯ್ ಗೆ ಸಹಾಯ ಮಾಡುತ್ತಿದ್ದಾರೆಂದು ರಾಣಿ ಸಹೋದರ ರಾಕೇಶ್ ಗಂಭೀರ ಆರೋಪ ಮಾಡಿದ್ದಾರೆ.

Comments are closed.