ಕರ್ನಾಟಕ

ಕಪ್ಪತಗುಡ್ಡದ ಮೇಲೆ ಮತ್ತೆ ಗಣಿ ಉದ್ಯಮಿಗಳ ಕಣ್ಣು; ಚಿನ್ನದ ಗಣಿಗಾರಿಕೆ ನಡೆಸಲು ರಾಜ್ಯ ಸರ್ಕಾರದ ಚಿಂತನೆ !

Pinterest LinkedIn Tumblr

ಬೆಂಗಳೂರು: ಅಪಾರ ಜೀವ ವೈವಿಧ್ಯತೆಯ ಆಗರವಾಗಿರುವ ಕಪ್ಪತಗುಡ್ಡದ ಮೇಲೆ ಮತ್ತೆ ಗಣಿ ಉದ್ಯಮಿಗಳ ಕಣ್ಣು ಬಿದ್ದಿದೆ. ರಾಜ್ಯ ಸರ್ಕಾರ ಗದಗದ ಕಪ್ಪತ ಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಅನುಮತಿ ನೀಡಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಗದಗ ಜಿಲ್ಲೆ ಕಪ್ಪತಗುಡ್ಡ ‘ವನ್ಯಜೀವಿಧಾಮ’ಸ್ಥಾನಮಾನ ರದ್ದುಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಬಂದಿದೆ. ‘ವನ್ಯಜೀವಿಧಾಮ ಸ್ಥಾನಮಾನವನ್ನು ರದ್ದುಗೊಳಿಸಲು ಪ್ರಭಾವಿ ಗಣಿ ಕಂಪನಿಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು, ಇದಕ್ಕಾಗಿ ಸ್ಥಳೀಯರನ್ನೂ ಬಳಕೆ ಮಾಡಿಕೊಳ್ಳುತ್ತಿವೆ.

ಇಲ್ಲಿರುವ ಚಿನ್ನದ ಅದಿರು ನಿಕ್ಷೇಪದ ಮೇಲೆ ಈ ಕಂಪನಿಗಳ ಕಣ್ಣು ನೆಟ್ಟಿವೆ’ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ವನ್ಯಜೀವಿಧಾಮ ಸ್ಥಾನಮಾನವನ್ನು ರದ್ದು ಮಾಡಿದರೆ, ಅದರಿಂದ ಗಣಿಗಾರಿಕೆಗೆ ಅನುಕೂಲವಾಗುತ್ತದೆ. ಹೀಗಾಗಿ ಈ ಕಂಪನಿಗಳು ಜನರನ್ನು ಮುಂದಿಟ್ಟುಕೊಂಡು ಮರೆಯಿಂದ ಸಮರ ನಡೆಸುತ್ತಿವೆ.

ಗದಗ ಜಿಲ್ಲೆ ಒಣ ಪ್ರದೇಶವಾಗಿದ್ದು, ಜಿಲ್ಲೆಯಲ್ಲಿ ಶೇ 6 ರಷ್ಟು ಮಾತ್ರ ಅರಣ್ಯಭೂಮಿ ಇದೆ. ಕಪ್ಪತಗುಡ್ಡದಲ್ಲಿ ಶೇ 5 ರಷ್ಟು ಅರಣ್ಯವಿದೆ. ಒಟ್ಟು 32 ಸಾವಿರ ಹೆಕ್ಟೇರ್‌ನಲ್ಲಿ 25,000 ಹೆಕ್ಟೇರ್‌ ಅರಣ್ಯ ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕುಗಳಲ್ಲಿ ವ್ಯಾಪಿಸಿದೆ.

ಈ ಪ್ರದೇಶವು ಅಪರೂಪದ ಗಿಡಮೂಲಿಕೆಗಳು ಮತ್ತು ಔಷಧಿಯ ಸಸ್ಯಗಳ ಆಗರ. ಅಲ್ಲದೇ, ವನ್ಯಜೀವಿಗಳ ಆವಾಸ ಸ್ಥಾನವೂ ಆಗಿದೆ. ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಸ್ವಾಮೀಜಿ ಮತ್ತು ಇತರ ಪ್ರಮುಖರ ಹೋರಾಟದ ಪರಿಣಾಮ ಈ ಪ್ರದೇಶ ಮೂಲ ಸ್ವರೂಪದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ.

ವನ್ಯಜೀವಿಧಾಮ ಸ್ಥಾನಮಾನ ಹಿಂದಕ್ಕೆ ಪಡೆಯುವಂತೆ ಕಾಣದ ಕೈಗಳ ಒತ್ತಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿಧಾಮ ಎಂದು ಘೋಷಿಸಿದ ಅಧಿಸೂಚನೆಯನ್ನು ಡಿನೋಟಿಫೈ ಮಾಡುವಂತೆ ಸಲ್ಲಿಕೆಯಾದ ಕಡತ ಮುಖ್ಯಮಂತ್ರಿ ಅವರ ಮುಂದೆ ಬಂದಿದೆ.

ಇದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಬೇಕಾದರೂ ಇಲ್ಲಿ ಹಾದಿ ಸುಗಮ ಮಾಡಿಕೊಂಡರೆ, ಕೇಂದ್ರದಲ್ಲಿ ನಿಭಾಯಿಸಬಹುದು ಎಂಬುದು ಗಣಿ ಕಂಪನಿಗಳ ಲೆಕ್ಕಾಚಾರ ಎನ್ನುತ್ತವೆ ಮೂಲಗಳು.

ವನ್ಯಜೀವಿ ಧಾಮದಲ್ಲಿ ಜಾನುವಾರುಗಳಿಗೆ ಮೇಯಲು ಅವಕಾಶ ನೀಡಲಾಗುತ್ತಿಲ್ಲ. ಅದಕ್ಕೆ ಅವಕಾಶ ನೀಡಲು ವನ್ಯಜೀವಿಧಾಮ ಸ್ಥಾನಮಾನ ರದ್ದು ಮಾಡಬೇಕು ಎಂಬ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಲ್ಡೋಟಾ ಕಂಪನಿ ಸುಮಾರು 20 ವರ್ಷಗಳಷ್ಟು ಹಿಂದೆ ಇಲ್ಲಿ ಚಿನ್ನದ ನಿಕ್ಷೇಪ ಇದೆಯೆ ಎಂಬ ಸಮೀಕ್ಷೆ ಮಾಡಿಸಿತ್ತು. ಆ ಪ್ರಕಾರ, ಈ ಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಚಿನ್ನ ಇರುವುದು ಪತ್ತೆ ಆಗಿತ್ತು ಎಂದು ಮೂಲಗಳು ತಿಳಿಸಿವೆ.

ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ರಾಜು ಖಾನಪ್ಪನವರ್ ಹೇಳಿದ್ದಾರೆ. ಸದ್ಯ ಗಣಿಗಾರಿಕೆ ಚೆಂಡು ಯಡಿಯೂರಪ್ಪ ಅವರ ಮುಂದಿದೆ. ಗದಗ ಜನತೆ ಕಪ್ಪತಗುಡ್ಡವನ್ನು ರಕ್ಷಿಸಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ವನ್ಯಜೀವಿ ಅಭಯಾರಣ್ಯ ಟ್ಯಾಗ್ ತೆಗೆಯಬೇಕು ಎಂದು ಕೆಲವು ಮಂದಿ ಒತ್ತಾಯಿಸಿದ್ದಾರೆಂದು ಗದಗ ಅರಣ್ಯಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಅರಣ್ಯ ಸಚಿವರು ಸಿಎಂ ಜೊತೆ ಚರ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನೂ ಈ ಸಂಬಂಧ ಅರಣ್ಯಾಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.

Comments are closed.