ಕರ್ನಾಟಕ

ರಾಜ್ಯಾದ್ಯಂತ ಬಂದ್; ಮುಂಜಾಗ್ರತೆ ಕ್ರಮವಾಗಿ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿಗೆ ಗೃಹ ಬಂಧನ

Pinterest LinkedIn Tumblr

ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಗುರುವಾರ ರಾಜ್ಯಾದ್ಯಂತ ಕರೆ ನೀಡಿರುವ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಕಡೆ ಸಾರ್ವಜನಿಕ ಸಾರಿಗೆ ಎಂದಿನಂತೆ ಸಂಚರಿಸುತ್ತಿವೆ. ಖಾಸಗಿ ವಾಹನಗಳು ರಸ್ತೆಗಿಳಿದಿವೆ.ಶಾಲಾ-ಕಾಲೇಜುಗಳು ಎಂದಿನಂತೆ ನಡೆಯುತ್ತಿವೆ.

ಈ ಮಧ್ಯೆ ಬಂದ್ ವೇಳೆ ಹೊರಬಂದು ಹೆಚ್ಚಿನ ಪ್ರತಿಭಟನೆ, ಗದ್ದಲ ನಡೆಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಮನೆ ಬಿಟ್ಟು ಹೋಗದಂತೆ ಅವರಿಗೆ ದಿಗ್ಭಂದನ ವಿಧಿಸಲಾಗಿದೆ.

ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಬೆಂಗಳೂರು ನಗರದಲ್ಲಿ ಪ್ರತಿಭಟನೆ ಮೆರವಣಿಗೆ ಸಾಧ್ಯತೆ ಹಿನ್ನೆಲೆ ಕಪ್ರವೀಣ್ ಶೆಟ್ಟಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಅವರ ಆರ್.ಟಿ ನಗರದಲ್ಲಿ ಇರುವ ನಿವಾಸದಲ್ಲೇ ಗೃಹ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಮಧ್ಯೆ ರಾಜಧಾನಿ ಬೆಂಗಳೂರಿನಲ್ಲಿ ಬಂದ್ ಬಿಸಿ ಸ್ವಲ್ಪ ಮಟ್ಟಿಗೆ ತಟ್ಟಿದೆ. ಬೆಂಗಳೂರಿನ ಮೆಜೆಸ್ಟಿಕ್, ಸಂಗೊಳ್ಳಿ ರಾಯಣ್ಣ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಕಡೆಗಳಲ್ಲಿ ವಾಹನ ಸಂಚಾರ ಸ್ಥಗಿತವಾಗಿದ್ದು, ಜನರ ಓಡಾಟ ಕಡಿಮೆಯಾಗಿದೆ. ಅಲ್ಲಲ್ಲಿ ಕನ್ನಡಪರ ಸಂಘಟನೆಗಳು ರಸ್ತೆ ತಡೆ ನಡೆಸಿರುವ ವರದಿ ಬಂದಿದೆ.

ಒಲಾ, ಉಬರ್ ಸೇವೆಗಳನ್ನು ಇಂದು ಸಾಯಂಕಾಲ 6 ಗಂಟೆಯವರೆಗೆ ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ನೀಡುತ್ತೇವೆ ಎಂದು ಒಲಾ, ಉಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ತಿಳಿಸಿದ್ದಾರೆ. ಇತರ ಸಾಮಾನ್ಯ ದಿನಗಳಲ್ಲಿ 70 ಸಾವಿರಕ್ಕೂ ಹೆಚ್ಚು ಉಬರ್, ಓಲಾ ಸಂಚರಿಸುತ್ತವೆ, ಆದರೆ ಇಂದು ಅವು ರಸ್ತೆಗಿಳಿದಿಲ್ಲ.

ಇನ್ನು ಮಂಗಳೂರಿನ ಫರಂಗಿಪೇಟೆಯಲ್ಲಿ ತಿರುಪತಿ-ಮಂಗಳೂರು ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

Comments are closed.