ಕರ್ನಾಟಕ

80 ಎಕರೆ ವಿಸ್ತೀರ್ಣದಲ್ಲಿ ನಿಖಿಲ್, ರೇವತಿ ಕಲ್ಯಾಣ

Pinterest LinkedIn Tumblr


ರಾಮನಗರ: ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ವಿವಾಹ ಕಾರ್ಯಕ್ರಮ ಏಪ್ರಿಲ್ 17 ರ ಶುಭ ಶುಕ್ರವಾರ ಬೆಳಗ್ಗೆ 9:15 ರಿಂದ 9:30 ರ ಶುಭ ಲಗ್ನದಲ್ಲಿ ಅದ್ಧೂರಿ ಸೆಟ್‍ನಲ್ಲಿ ಶಾಸ್ತ್ರೋಕ್ತ ಮತ್ತು ವಾಸ್ತು ಪ್ರಕಾರವಾಗಿ ನಡೆಯಲಿದೆ. ಮದುವೆ ರಾಮನಗರ-ಚನ್ನಪಟ್ಟಣ ನಡುವಿನ ಜನಪದ ಲೋಕದ ಬಳಿ ನೆರವೇರುವುದಾಗಿ ಎಚ್‍ಡಿ ಕುಮಾರಸ್ವಾಮಿಯವರು ರಾಮನಗರದಲ್ಲಿ ತಿಳಿಸಿದ್ದಾರೆ.

ಎಚ್‍ಡಿಕೆ ತಮ್ಮ ರಾಜಕೀಯ ಕರ್ಮಭೂಮಿ ರಾಮನಗರ ಹಾಗೂ ಈಗಿನ ಸ್ವಕ್ಷೇತ್ರ ಚನ್ನಪಟ್ಟಣದ ನಡುವಿನ ಜಾಗವನ್ನು ಮದುವೆ ಕಾರ್ಯಕ್ಕೆ ಅಂತಿಮಗೊಳಿಸಿದ್ದಾರೆ. ವಿವಾಹ ನಡೆಯುವ ಸ್ಥಳವನ್ನು ವೀಕ್ಷಣೆ ಮಾಡಲು ತಮ್ಮ ಬೀಗರಾದ ವಧು ರೇವತಿ ತಂದೆ ಮಂಜುನಾಥ್ ಜೊತೆ ಎಚ್‍ಡಿಕೆ ಇಂದು ಭೇಟಿ ನೀಡಿದ್ದರು. ಎರಡನೇ ಬಾರಿಗೆ ಮದುವೆಯ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಬೀಗರಾದ ಮಂಜುನಾಥ್‍ಗೆ ಎಲ್ಲೆಲ್ಲಿ ಯಾವ್ಯಾವ ರೀತಿಯಲ್ಲಿ ಮದುವೆ ಕಾರ್ಯ ನಡೆಯಲಿದೆ ಎಂಬ ಮಾಹಿತಿಯನ್ನು ಸಹ ನೀಡಿದರು.

ಮದುವೆಯ ಸಿದ್ಧತಾ ಕಾರ್ಯಗಳನ್ನು ತಮ್ಮ ಸಂಬಂಧಿ ರಾಜು ಹಾಗೂ ಜೆಡಿಎಸ್ ಎಂಎಲ್‍ಸಿ ಭೋಜೇಗೌಡ ಎಂಬವರು ವಹಿಸಿಕೊಂಡಿದ್ದು, ಯಾವ ಸ್ಥಳದಲ್ಲಿ ಅದ್ಧೂರಿ ಸೆಟ್ ಹಾಕಿ ಕಲ್ಯಾಣ ಮಂಟಪ ನಿರ್ಮಿಸಬೇಕು. ಎಲ್ಲಿ ಊಟದ ವ್ಯವಸ್ಥೆಗೆ ಜಾಗ ಮಾಡಬೇಕು. ಅಲ್ಲದೇ ಬರುವವಂತಹ ಅತಿಥಿಗಳು, ರಾಜಕೀಯ ಗಣ್ಯರು, ಹಾಗೂ ಸಾರ್ವಜನಿಕರ ಈಗಾಗಲೇ ವಿವಾಹದ ಸ್ಥಳವನ್ನು ಜೆಸಿಬಿ ಯಂತ್ರಗಳ ಮೂಲಕ ಸಮತಟ್ಟು ಮಾಡಿ ಸಿದ್ಧತೆಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ರಾಮನಗರ-ಚನ್ನಪಟ್ಟಣ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಸೆಂಟ್ರಲ್ ಮುಸ್ಲಿಂ ಅಸೋಶಿಯೇಷನ್ ಹಾಗೂ ಜನಪದ ಲೋಕದ ಹಿಂಭಾಗದಲ್ಲಿ ನಡೆಸಲು ಸ್ಥಳವನ್ನ ಫೈನಲ್ ಮಾಡಲಾಗಿದೆ. ಸೆಂಟ್ರಲ್ ಮುಸ್ಲಿಂ ಅಸೋಶಿಯೇಷನ್‍ಗೆ ಸೇರಿದ 22 ಎಕರೆ, ಉದ್ಯಮಿಯೊಬ್ಬರಿಗೆ ಸೇರಿದ 23 ಎಕರೆ ಹಾಗೂ ಲೇಔಟ್‍ಗೆ ಸೇರಿದ 20 ಎಕರೆ ಹಾಗೂ 10 ಎಕರೆಯಷ್ಟು ಸರ್ಕಾರಿ ಜಾಗ ಒಟ್ಟು 80 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಅದ್ಧೂರಿ ಸೆಟ್ ನಿರ್ಮಿಸಿ ನಿಖಿಲ್-ರೇವತಿ ವಿವಾಹ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.

ಮದುವೆಗೆ ಕನಿಷ್ಟ 5 ಲಕ್ಷ ಜನರು ಭಾಗವಹಿಸುವ ಸಾಧ್ಯತೆಗಳಿವೆ. ಮದುವೆ ಕಾರ್ಯಕ್ಕೆ ಈಗಾಗಲೇ ಸೆಂಟ್ರಲ್ ಮುಸ್ಲಿಂ ಅಸೋಶಿಯೇಷನ್‍ನಿಂದ ಅನುಮತಿ ಸಿಕ್ಕಿದೆ. ಸರ್ಕಾರಿ ಜಾಗಕ್ಕೆ ಈಗಾಗಲೇ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮದುವೆ ಶಾಸ್ತ್ರೋಕ್ತವಾಗಿ, ವಾಸ್ತುಪ್ರಕಾರ ನೆರವೇರಲಿದ್ದು, ಬೇರೆ ಜಾಗವಾಗಿರುವ ಕಾರಣ ಭೂಮಿಗೆ ಶಕ್ತಿ ತುಂಬುವ ಹಿನ್ನೆಲೆಯಲ್ಲಿ ತಮ್ಮ ಜ್ಯೋತಿಷಿಗಳು, ಅರ್ಚಕರು ಬಂದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ತಮ್ಮ ಪುತ್ರನ ವಿವಾಹಕ್ಕೆ ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ಪ್ರತೀ ಮನೆಗೂ ಸಹ ಆಮಂತ್ರಣ ಕಳುಹಿಸಿ ಮದುವೆಗೆ ಆಹ್ವಾನಿಲಿದ್ದೇವೆ ಏಪ್ರಿಲ್ 17ರಂದು ನಿಖಿಲ್ ರೇವತಿ ಮದುವೆ ನಡೆಯಲಿದೆ ಎಂದು ಎಚ್‍ಡಿಕೆ ತಿಳಿಸಿದರು.

Comments are closed.