ಕರ್ನಾಟಕ

ನಾಳೆ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್‌

Pinterest LinkedIn Tumblr

ಬೆಂಗಳೂರು: ಕರ್ನಾಟಕ ಸಂಘಟನೆಗಳ ಒಕ್ಕೂಟ ಫೆಬ್ರವರಿ 13ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ 600ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ.

ಗುರುವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದೆ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಬಂದ್ ಕರೆ ನೀಡಲಾಗಿದೆ.

ವಿವಿಧ ಸಂಘಟನೆಗಳ ಸದಸ್ಯರು ಬೆಂಗಳೂರಿನ ಟೌನ್‌ ಹಾಲ್‌ನಿಂದ ಫ್ರೀಡಂ ಪಾರ್ಕ್‌ ತನಕ ಬೃಹತ್ ಪ್ರತಿಭಟನಾ ಜಾಥಾ ನಡೆಸಲು ತೀರ್ಮಾನಿಸಿವೆ.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸುತ್ತಿದೆ.

ಈ ಪ್ರತಿಭಟನೆ ಫೆ.13ರ ಗುರುವಾರ 100ನೇ ದಿನಕ್ಕೆ ಕಾಲಿಡುತ್ತಿದೆ. ಆದ್ದರಿಂದ, ಕರ್ನಾಟಕ ಬಂದ್ ಕರೆ ನೀಡಲಾಗಿದೆ. ಕೆಲವು ಸಂಘಟನೆಗಳು ನೈತಿಕ ಬೆಂಬಲವನ್ನು ನೀಡಿವೆ. ಪರಿಸ್ಥಿತಿ ನೋಡಿಕೊಂಡು ಸರ್ಕಾರಿ ಬಸ್ ಸಂಚಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫೆಬ್ರವರಿ 13ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಬೆಂಬಲ ನೀಡಿಲ್ಲ. “ರಕ್ಷಣಾ ವೇದಿಕೆ 1999ರಿಂದಲೂ ವರದಿ ಜಾರಿಗೆ ಹೋರಾಟ ಮಾಡುತ್ತಲೇ ಬಂದಿದೆ. ಅದೇ ವಿಚಾರವಾಗಿ ಕೆಲ ಸಂಘಟನೆಗಳು ಹೋರಾಟ ಮಾಡಲು ಮುಂದಾಗಿವೆ.

ಸರೋಜಿನಿ ಮಹಿಷಿ ವರದಿ ಜಾರಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ, ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲವಿಲ್ಲ” ಎಂದು ಟಿ. ಎ. ನಾರಾಯಣ ಗೌಡ ಹೇಳಿದ್ದಾರೆ. ಹೋಟೆಲ್‌ಗಳ ಬೆಂಬಲವಿಲ್ಲ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಬಂದ್‌ಗೆ ಬೆಂಬಲ ನೀಡಿಲ್ಲ.

“ಕರ್ನಾಟಕ ಬಂದ್‌ಗೆ ನಮ್ಮ ಸಂಘವು ಬೆಂಬಲ ನೀಡುವುದಿಲ್ಲ. ಗ್ರಾಹಕರ ಹಿತದೃಷ್ಟಿಯಿಂದ ಹೋಟೆಲ್ ತರೆಯಲಾಗುತ್ತದೆ. ಎಲ್ಲಾ ಹೋಟೆಲ್ ತೆರೆದಿರುತ್ತದೆ” ಎಂದು ಸಂಘದ ಅಧ್ಯಕ್ಷ ಪಿ. ಸಿ. ರಾವ್ ಹೇಳಿದ್ದಾರೆ.

ಲಾರಿ ಮಾಲೀಕರ ಸಂಘ, ಓಲಾ ಮತ್ತು ಊಬರ್ ಚಾಲಕರ ಸಂಘ, ಬೀದಿ ವ್ಯಾಪಾರಿಗಳು, ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘ, ಆದರ್ಶ ಆಟೋ ಯೂನಿಯನ್, ಪೀಸ್ ಆಟೋ ಯೂನಿಯನ್, ಜೈ ಭಾರತ ಚಾಲಕರ ಸಂಘ, ಸಾರಥಿ ಸೇನೆ ಸೇರಿದಂತೆ 600 ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ.

ಆಟೋಗಳ ಸಂಚಾರವಿಲ್ಲ ಆದರ್ಶ ಆಟೋ ಯೂನಿಯನ್, ಪೀಸ್ ಆಟೋ ಯೂನಿಯನ್ ಸೇರಿದಂತೆ ವಿವಿಧ ಆಟೋ ಚಾಲಕರ ಸಂಘಟನೆಗಳು ಬಂದ್‌ಗೆ ಬೆಂಬಲವನ್ನು ನೀಡಿವೆ. ಆದ್ದರಿಂದ, ಆಟೋಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

Comments are closed.