ಕರ್ನಾಟಕ

ಮಹಿಳೆಗೆ ಅತ್ತ ಮೊದಲನೇ ಗಂಡನೂ ಇಲ್ಲ, ಇತ್ತ ಎರಡನೇ ಗಂಡನೂ ಇಲ್ಲ

Pinterest LinkedIn Tumblr


ಕೊಪ್ಪಳ: ಪ್ರೀತಿಸಿ ಮದುವೆಯಾಗಿದ್ದ ಪತಿಯೊಬ್ಬ ತುಂಬು ಗರ್ಭಿಣಿ ಪತ್ನಿಯನ್ನು ಬಿಟ್ಟು ಹೋಗಿರುವ ಪ್ರಕರಣವೊಂದು ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ತಾಲೂಕಿನ ಮೆಳ್ಳಿಕೇರಿ ಗ್ರಾಮದ ವಿನೋದ ರೆಡ್ಡಿ ಇದೀಗ ತನ್ನ ಪತ್ನಿ ತುಂಬು ಗರ್ಭಿಣಿಯನ್ನು ಬಿಟ್ಟು ಹೋಗಿದ್ದಾನೆ. ಕಳೆದ ನಾಲ್ಕು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಸೀಗನಹಳ್ಳಿ ಗ್ರಾಮದ ಯಂಕಮ್ಮಳನ್ನು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದ ಮುದಕಪ್ಪನ ಜೊತೆ ವಿವಾಹ ಮಾಡಿಕೊಡಲಾಗಿತ್ತು.

ಮದುವೆಗೂ ಮೊದಲು ಮಹಿಳೆ ಮೆಳ್ಳಿಕೇರಿಯ ವಿನೋದ ರೆಡ್ಡಿಯನ್ನು ಪ್ರೀತಿಸುತ್ತಿದ್ದಳು. ಮದುವೆ ಬಳಿಕವೂ ವಿನೋದ ರೆಡ್ಡಿ ಜೊತೆ ಮಹಿಳೆ ಸಂಪರ್ಕ ಹೊಂದಿದ್ದಳು. ಅಷ್ಟೇ ಅಲ್ಲ ‘ನಿನ್ನ ಗಂಡನನ್ನು ಬಿಟ್ಟು ಬಾ, ನಾನು ನಿನ್ನನ್ನು ಮದುವೆ ಆಗ್ತೀನಿ’ ಎಂದು ಮಹಿಳೆಗೆ ವಿನೋದ ರೆಡ್ಡಿ ಹೇಳಿದ್ದನು ಎನ್ನಲಾಗಿದೆ.

ಮಹಿಳೆಯ ಪ್ರೀತಿ ವಿಷಯ ತಿಳಿದ ಆಕೆಯ ಮೊದಲನೇ ಪತಿ ಮುದಕಪ್ಪ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಬಳಿಕ ಮುದಕಪ್ಪನನ್ನು ಬಿಟ್ಟು ಮಹಿಳೆಗೆ ವಿನೋದರೆಡ್ಡಿ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಬಳಿಕ ಬೆಂಗಳೂರಿಗೆ ದುಡಿಯಲು ಹೋಗೋಣ ಎಂದು ಹೇಳಿ ಮಹಿಳೆಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದನು. ಬೆಂಗಳೂರಿಗೆ ಹೋಗುವಾಗ ಕೊಪ್ಪಳ ರೈಲ್ವೇ ನಿಲ್ದಾಣದಲ್ಲಿ ಊಟ ತರುತ್ತೇನೆಂದು ಹೇಳಿ ವಿನೋದ ರೆಡ್ಡಿ ಮಹಿಳೆಯನ್ನು ಬಿಟ್ಟು ಹೋಗಿದ್ದಾನೆ. ಆಗಿನಿಂದ ವಿನೋದ ರೆಡ್ಡಿ ಯಾರ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದಾಗಿ ಮಹಿಳೆ ಅತ್ತ ಮೊದಲನೇ ಗಂಡನೂ ಇಲ್ಲ, ಇತ್ತ ಎರಡನೇ ಗಂಡನೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾಳೆ.

ಸದ್ಯ ಮಹಿಳೆ ಈಗ 9 ತಿಂಗಳ ಗರ್ಭಿಣಿಯಾಗಿದ್ದು, 4 ತಿಂಗಳು ಸ್ವಾದಾರ್ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಳು. ಆದರೆ ಮಹಿಳೆ ತುಂಬು ಗರ್ಭಿಣಿಯಾದ ಬಳಿಕ ಸ್ವಾದಾರ್ ಕೇಂದ್ರದಿಂದ ಸಿಬ್ಬಂದಿ ಹೊರಹಾಕಿದ್ದು, ಇನ್ನೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ನ್ಯಾಯಕ್ಕಾಗಿ ಕೊಪ್ಪಳ ಗ್ರಾಮಿಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ತಿಂಗಳು ಮಹಿಳೆಗೆ ಹೆರಿಗೆ ಇದ್ದು, ನನಗೆ ವಿನೋದ ರೆಡ್ಡಿಯನ್ನು ಹುಡುಕಿಕೊಡಿ ಎಂದು ಬೇಡಿಕೊಳ್ಳುತ್ತಿದ್ದಾಳೆ.

Comments are closed.