ಕರ್ನಾಟಕ

ಇನ್​ಸ್ಪೆಕ್ಟರ್ ಕಿರುಕುಳದಿಂದ ಅಮ್ಮ, ಪುತ್ರ ಆತ್ಮಹತ್ಯೆ?

Pinterest LinkedIn Tumblr


ಬೆಂಗಳೂರು: ಅಪಾರ್ಟ್​ವೆುಂಟ್​ನಿಂದ ತಾಯಿ, ಮಗ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಇನ್​ಸ್ಪೆಕ್ಟರ್ ಚಂದ್ರಪ್ಪ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಜ್ಜಾಗುತ್ತಿದ್ದಾರೆ.

2018ರ ಮಾ.6ರಂದು ಮೌನೇಶ್ (34) ಮತ್ತು ಸುಂದರಮ್ಮ (60) ಎಂಬುವರು ಕಾಡುಗೋಡಿ ಬೆಳತ್ತೂರಿನ ಅಪಾರ್ಟ್​ವೆುಂಟ್​ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಶಹಾಪುರ ತಾಲೂಕಿನ ತಾಯಿ ಮತ್ತು ಪುತ್ರನನ್ನು ಇನ್​ಸ್ಪೆಕ್ಟರ್ ಚಂದ್ರಪ್ಪ ಎಳೆದುತಂದು ತಮ್ಮ ಫ್ಲ್ಯಾಟ್​ನಲ್ಲಿ ಕೂಡಿ ಹಾಕಿದ್ದರು. ಆಗ ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್​ಸ್ಪೆಕ್ಟರ್ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಇನ್​ಸ್ಪೆಕ್ಟರ್ ಕಿರುಕುಳವೇ ತಾಯಿ ಹಾಗೂ ಪುತ್ರನ ಆತ್ಮಹತ್ಯೆಗೆ ಕಾರಣ ಎಂಬುದು ಖಚಿತವಾಗಿದೆ. ಮೌನೇಶ್ ತನ್ನ ಕಾಲಿನ ಮೇಲೆ ಬರೆದಿದ್ದ ಡೆತ್​ನೋಟ್ ಇದಕ್ಕೆ ಪ್ರಮುಖ ಸಾಕ್ಷಿ. ಈ ಹಿನ್ನೆಲೆಯಲ್ಲಿ ಚಂದ್ರಪ್ಪ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಿಐಡಿ ತಯಾರಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ತಂಗಿ ಓಡಿ ಹೋಗಿದ್ದಕ್ಕೆ ಗೃಹಬಂಧನ

ಕಾಡುಗೋಡಿ ಠಾಣೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಪ್ಪ, 2017ರ ಜೂನ್​ನಲ್ಲಿ ಕೋಲಾರಕ್ಕೆ ವರ್ಗವಾಗಿದ್ದರು. ಬೆಳತ್ತೂರಿನ ಅಪಾರ್ಟ್​ವೆುಂಟ್​ನಲ್ಲಿ ತಂಗಿ ಜತೆ ನೆಲೆಸಿದ್ದರು. ಪತ್ನಿ, ಮಕ್ಕಳು, ತಾಯಿ ಜತೆ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಆಗಿದ್ದ ಮೌನೇಶ್ ಶಹಾಪುರದಲ್ಲಿ ನೆಲೆಸಿದ್ದ. ಯಾದಗಿರಿಯಲ್ಲಿ ಬಿ.ಇಡಿ ವ್ಯಾಸಂಗ ಮಾಡುತ್ತಿದ್ದ ಚಂದ್ರಪ್ಪ ಅವರ ತಂಗಿ ಬಸ್​ನಲ್ಲಿ ಓಡಾಡುವಾಗ ಮೌನೇಶ್ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. 2018ರಲ್ಲಿ ಫೆ.17ರಂದು ಸಹೋದರಿ ಮನೆ ಬಿಟ್ಟುಹೋಗಿದ್ದಳು. ಶಹಾಪುರಕ್ಕೆ ಹೋದ ಇನ್​ಸ್ಪೆಕ್ಟರ್, ಮೌನೇಶ್ ಮತ್ತವನ ತಾಯಿ ಜತೆ ಗಲಾಟೆ ಮಾಡಿದ್ದರು. ತಂಗಿ ಮನೆಗೆ ಮರಳುವವರೆಗೂ ನನ್ನ ಮನೆಯಲ್ಲೇ ಇರಿ ಎಂದು ಕರೆತಂದು ಫ್ಲ್ಯಾಟ್​ನಲ್ಲಿ ಕೂಡಿ ಹಾಕಿದ್ದರು. ಇದರಿಂದ ನೊಂದಿದ್ದ ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು.

Comments are closed.