ಕರ್ನಾಟಕ

ಬುದ್ಧಿವಾದ ಹೇಳಿದ ಮಲತಂದೆ ವಿರುದ್ಧ ಲೈಂಗಿಕ ಶೋಷಣೆ ಆರೋಪ: ಬಯಲಾದ ಅಸಲಿ ಬಣ್ಣ

Pinterest LinkedIn Tumblr


ಬೆಂಗಳೂರು: ಅಪ್ರಾಪ್ತ ವಯಸ್ಸಿನ ಪ್ರೀತಿಗೆ ಕುಟುಂಬ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಮಲತಂದೆಯ ವಿರುದ್ಧ ಲೈಂಗಿಕ ಶೋಷಣೆ ಆರೋಪ ಮಾಡುವ ಮೂಲಕ ಪೋಕ್ಸೋ ಕಾಯ್ದೆಯ ದುರುಪಯೋಗಕ್ಕೆ ಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಬಾಲಕಿಯ ಆರೋಪದ ಕುರಿತು ಪರಿಹಾರ ಮಕ್ಕಳ ಸಹಾಯವಾಣಿಗೆ ದೂರು ಬಂದಾಗ ವಿಚಾರಣೆ ನಡೆಸಿದ ಫ್ಯಾಮಿಲಿ ಕೌನ್ಸಿಲಿಂಗ್‌ ಸದಸ್ಯರು, ಪ್ರಕರಣವನ್ನು ಸೂಕ್ಷ್ಮವಾಗಿ ನಿಭಾಯಿಸಿ ಗಂಭೀರ ಸ್ವರೂಪದ ಆರೋಪದಿಂದ ವ್ಯಕ್ತಿಯನ್ನು ಪಾರು ಮಾಡಿದ್ದಾರೆ.

ಆರೋಪ ಮಾಡಿದ್ದ 17 ವರ್ಷದ ಬಾಲಕಿಯ ತಂದೆ ನಿಧನರಾಗಿದ್ದು, ತಾಯಿ ಮತ್ತೊಂದು ವಿವಾಹವಾಗಿದ್ದಾರೆ. ತಾಯಿಯ ಮತ್ತೊಂದು ವಿವಾಹದ ಬಳಿಕ ಬಾಲಕಿ ತನ್ನ ಅಜ್ಜಿಯ ಮನೆಯಲ್ಲಿ ವಾಸವಿದ್ದಳು. ಈ ವೇಳೆ 19 ವರ್ಷದ ಯುವಕನ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಈ ವಿಷಯ ತಿಳಿದ ಬಾಲಕಿಯ ಅಜ್ಜಿ, ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ-ಪ್ರೇಮವೆಂದು ಜೀವನ ಹಾಳು ಮಾಡಿಕೊಳ್ಳುವುದು ಬೇಡವೆಂದು ಬುದ್ಧಿವಾದ ಹೇಳಿ ವಾಪಸ್‌ ಪಾಲಕರ ಬಳಿಗೆ ಕಳುಹಿಸಿದ್ದರು.

ಆದರೆ, ಪಾಲಕರ ಮನೆಯಿಂದ ರಾತ್ರೋರಾತ್ರಿ ಹೊರಟ ಬಾಲಕಿ, ಸ್ನೇಹಿತನ ಮನೆ ಸೇರಿದ್ದಳು. ಈ ವಿಚಾರ ತಿಳಿದ ಪಾಲಕರು ಆಕೆಯನ್ನು ಅಲ್ಲಿಂದ ತಮ್ಮ ಮನೆಗೆ ಕರೆದುಕೊಂಡು ಬುದ್ಧಿವಾದ ಹೇಳಿದ್ದರು. ಆದರೆ, ತಾವಿಬ್ಬರೂ ಪ್ರೀತಿ ಮಾಡುತ್ತಿದ್ದು ಮದುವೆಯಾಗುತ್ತೇವೆ ಎಂದು ಬಾಲಕಿ ಹೇಳಿದಳು. ಅದಕ್ಕೆ ಇಬ್ಬರಿಗೂ ಮದುವೆ ವಯಸ್ಸಾಗಿಲ್ಲ. ಮದುವೆ ವಯಸ್ಸಿಗೆ ಬಂದ ಬಳಿಕ ಮದುವೆ ಮಾಡಿಕೊಡುತ್ತೇವೆ ಎಂದು ಎರಡೂ ಕುಟುಂಬ ಸದಸ್ಯರು ತಿಳಿ ಹೇಳಿದ್ದರು. ಅದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದರು.

ದಿನವಿಡೀ ಮೊಬೈಲ್‌ ಚಾಟಿಂಗ್‌ಗೆ ವಿರೋಧಿಸಿದ ಪಾಲಕರು
ಪಾಲಕರು ಭರವಸೆ ನೀಡಿದ ಬಳಿಕ ಸುಮ್ಮನಾದ ಅಪ್ರಾಪ್ತೆ ಶಿಕ್ಷಣದ ಕಡೆ ಗಮನಹರಿಸುವ ಬದಲು ದಿನವಿಡೀ ಮೊಬೈಲ್‌ನಲ್ಲಿ ಚಾಟಿಂಗ್‌, ಮೆಸೇಜಿಂಗ್‌ನಲ್ಲೇ ಕಾಲ ಕಳೆಯುತ್ತಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ಪಾಲಕರು ಮೊಬೈಲ್‌ ಪೋನ್‌ ಬಳಕೆ ಮಾಡದಂತೆ ಮತ್ತೆ ಬುದ್ಧಿವಾದ ಹೇಳಿದರು.

ಮೊದಲು ಪ್ರೀತಿಗೆ ವಿರೋಧ, ನಂತರ ಮೊಬೈಲ್‌ ಫೋನ್‌ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕುಪಿತಗೊಂಡ ಬಾಲಕಿ, ತನ್ನ ಮಲ ತಂದೆ ವಿರುದ್ಧ ಲೈಂಗಿಕ ಶೋಷಣೆ ಆರೋಪ ಮಾಡಿ ವೈಟ್‌ಫೀಲ್ಡ್‌ ವಿಭಾಗದಲ್ಲಿನ ಪೊಲೀಸ್‌ ಠಾಣೆಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಬಾಲಕಿಯ ದೂರಿನ ಬಗ್ಗೆ ಅನುಮಾನಗೊಂಡ ಪೊಲೀಸರು, ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ಪರಿಹಾರ ಮಕ್ಕಳ ಸಹಾಯವಾಣಿಗೆ ಕಳುಹಿಸಿಕೊಟ್ಟಿದ್ದರು.

ಕೌನ್ಸಿಲಿಂಗ್‌ ವೇಳೆ ಬೆಳಕಿಗೆ
”ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದಾಗ ತನ್ನ ಮಲತಂದೆಯಿಂದ ಲೈಂಗಿಕ ಶೋಷಣೆ ನಡೆದಿದೆ ಎಂದು ಹೇಳಿದಳು. ಇದೊಂದು ಗಂಭೀರ ಸ್ವರೂಪದ ಅಪರಾಧ. ಹೀಗಾಗಿ, ಸೂಕ್ಷ್ಮವಾಗಿ ವಿಚಾರಣೆ ಮಾಡಲಾಯಿತು. ನಂತರ ಆಕೆಯ ತಾಯಿಯನ್ನು ವಿಚಾರಿಸಿದಾಗ ಪ್ರೀತಿ ವಿಷಯ ತಿಳಿಸಿದರು. ಅದಾದ ಬಳಿಕ ಬಾಲಕಿ ಪ್ರೀತಿಸುತ್ತಿದ್ದ ಯುವಕ ಮತ್ತು ಆತನ ಕುಟುಂಬ ಸದಸ್ಯರನ್ನು ಕರೆಸಿ ವಿಚಾರಣೆ ಮಾಡಲಾಯಿತು. ಆಪ್ತ ಸಮಾಲೋಚನೆ ಸಂದರ್ಭದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಬೆಳವಣಿಗೆಗಳು ಬೆಳಕಿಗೆ ಬಂದವು. ಹೀಗಾಗಿ, ಮಲತಂದೆಯಿಂದ ಯಾವ ರೀತಿಯಿಂದ ಶೋಷಣೆ ಆಗಿದೆ ಎಂದು ವಿವರವಾಗಿ ಕೇಳಿದಾಗ ಬಾಲಕಿ ತಡವರಿಸಿದಳು. ಲೈಂಗಿಕ ಶೋಷಣೆಯ ವಿವರಣೆ ಅಸಮಂಜಸವಾಗಿತ್ತು. ಸತ್ಯ ಹೇಳು ಎಂದು ಕೇಳಿದಾಗ ಪ್ರೀತಿ ವಿಚಾರ ಮತ್ತು ಮೊಬೈಲ್‌ ಬಳಕೆಗೆ ವಿರೋಧದ ಕುರಿತು ತಿಳಿಸಿದಳು” ಎಂದು ಫ್ಯಾಮಿಲಿ ಕೌನ್ಸಿಲಿಂಗ್‌ನ ಹಿರಿಯ ಕೌನ್ಸಿಲರ್‌ ಪ್ರೀತಿ ಬಾಳಿಗ ತಿಳಿಸಿದರು. ಬಾಲಕಿಯ ಆರೋಪದ ಹಿನ್ನೆಲೆಯಲ್ಲಿ ಮಲತಂದೆ ತನ್ನ ಮನೆಯನ್ನು ತೊರೆದು ಪ್ರತ್ಯೇಕವಾಗಿ ನೆಲೆಸಿದ್ದಾರೆ.

ಕಾಯ್ದೆಯ ದುರುಪಯೋಗ ಯತ್ನ:
”ಕೌಟುಂಬಿಕ ವಿಚಾರಗಳು ಸಹಾಯವಾಣಿಗೆ ಬರುತ್ತವೆ. ವಿಚ್ಛೇದನ ಹಾಗೂ ಆರೋಪ ಪ್ರಕರಣ ತಮ್ಮ ಪರವಾಗಿ ಆಗಲಿ ಎಂದು ಕೆಲವು ಮಹಿಳೆಯರು, ಆಪ್ತ ಸಮಾಲೋಚನೆ ವೇಳೆ ತಮ್ಮ ಹೆಣ್ಣು ಮಕ್ಕಳಿಂದ ಲೈಂಗಿಕ ಶೋಷಣೆಯ ಸುಳ್ಳು ಆರೋಪಗಳನ್ನು ಮಾಡಿಸುತ್ತಾರೆ. ಆದರೆ, ದೂರಿನ ಕುರಿತು ಸೂಕ್ಷ್ಮವಾಗಿ ವಿಚಾರಣೆ ಮಾಡಿದಾಗ ಅವು ತಾಯಿಯ ಪ್ರಚೋದನೆಯಿಂದ ಆಗಿರುವುದೆಂದು ಖಚಿತವಾಗುತ್ತದೆ. ಎಲ್ಲರಿಗೂ ಕಾಯ್ದೆಯ ಗಂಭೀರತೆಯ ಕುರಿತು ಮಾಹಿತಿ ಮತ್ತು ಜಾಗೃತಿ ಮೂಡಿಸುತ್ತಿದ್ದೇವೆ” ಎಂದು ಹಿರಿಯ ಕೌನ್ಸಿಲರ್‌ ಪ್ರೀತಿ ಬಾಳಿಗ ತಿಳಿಸಿದರು.

Comments are closed.