ಕರ್ನಾಟಕ

ರಾಜ್ಯದ ಮೆಣಸಿನಕಾಯಿ ಬೆಳೆಗಾರರನ್ನೂ ಕಾಡುತ್ತಿರುವ ಕೊರೋನಾ ವೈರಸ್​

Pinterest LinkedIn Tumblr


ಬಳ್ಳಾರಿ: ಮಹಾಮಾರಿ ಕೊರೋನಾ ವೈರಸ್ ಗೆ ಚೀನಾ ದೇಶ ಅಕ್ಷರಶಃ ಬಳಲಿ ಬೆಂಡಾಗುತ್ತಿದೆ. ಈ ಕೊರೋನಾ ನಮ್ಮ ದೇಶದಲ್ಲಿಯೂ ಹರಡಿದ್ದು ಪ್ರಾಣಭೀತಿ ಎದುರಾಗುತ್ತಿದೆ. ಈ ಸಂದರ್ಭದಲ್ಲಿ ಕೆಂಪು ಮೆಣಸಿನಕಾಯಿ ಬೆಳೆದ ನಮ್ಮ ರಾಜ್ಯದ ರೈತರಿಗೆ ಸಂಕಷ್ಟ ಎದುರಾಗಿದೆ. ಅಸಲಿಗೆ ಈ ಕರೋನಾ ವೈರಸ್ ಗೂ ನಮ್ಮ ರೈತರು ಬೆಳೆದ ಕೆಂಪು ಮೆಣನಸಿನಕಾಯಿಗೂ ಏನು ಸಂಬಂಧ ಅಂತೀರಾ? ಈ ಸ್ಟೋರಿ ಓದಿ.

ಚೀನಾದಲ್ಲಿ ಕೊರೋನಾ ವೈರಸ್ ಪರಿಣಾಮ ಬಳ್ಳಾರಿ ರೈತರು ಕಂಗಾಲಾಗಿದ್ದಾರೆ. ರಾಜ್ಯದ ವಿವಿಧೆಡೆ ಬೆಳೆಯುವ ಕೆಂಪು ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತವಾಗಿದೆ. ಹಾಗಂತ ಇದಕ್ಕೆ ನಮ್ಮ ದೇಶದಲ್ಲಿ ವ್ಯವಹಾರವೇನು ಕಡಿಮೆಯಾಗಿಲ್ಲವೆಂದಲ್ಲ. ಆದರೆ ನಮ್ಮ ದೇಶದಿಂದ ಚೀನಾ ದೇಶಕ್ಕೆ ರಫ್ತಾಗುತ್ತಿದ್ದ ಕೆಂಪು ಮೆಣಸಿನಕಾಯಿ ಸದ್ಯ ಸ್ಥಗಿತಗೊಂಡಿದೆ. ಯಾಕೆಂದರೆ ಸದ್ಯ ಚೀನಾ ದೇಶಕ್ಕೆ ಕಳುಹಿಸುವ ಬೆಳೆ-ಸರಕು ರಫ್ತನ್ನು ಬಂದ್ ಮಾಡಿದೆ.

ರಾಜ್ಯದಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿ ಹೇಳಿಕೇಳಿ ಮೆಣಸಿನಕಾಯಿ ಮಾರಾಟದ ಪ್ರಮುಖ ವ್ಯಾಪಾರಿ ಕೇಂದ್ರ. ರಾಜ್ಯದ ಹಲವು ಭಾಗಗಳಲ್ಲಿ ಬೆಳೆಯುವ ಕೆಂಪು ಮೆಣಸಿನಕಾಯಿ ಇಲ್ಲಿಯೇ ಬರೋದು. ಪ್ರಸಿದ್ಧ ಬ್ಯಾಡಗಿ ಮೂಲಕ ಬಳ್ಳಾರಿ ಜಿಲ್ಲೆಯ ಕೆಂಪು ಮೆಣಸಿನಕಾಯಿ ಚೀನಾ ದೇಶಕ್ಕೆ ರಫ್ತಾಗುತ್ತಿತ್ತು. ಕಳೆದ 15 ದಿನಗಳ ಹಿಂದೆ ಬ್ಯಾಡಗಿ ಸೇರಿ ರಾಜ್ಯದಲ್ಲಿ ವಿವಿಧ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ಗೆ ಕೆಂಪು ಮೆಣಸಿನಕಾಯಿಗೆ 17 ರಿಂದ 20 ಸಾವಿರ ಬೆಲೆಯಿತ್ತು. ಆದರೆ, ಇದೀಗ ಏಕಾಏಕಿ ಕ್ವಿಂಟಾಲ್ಗೆ ಕೇವಲ 10 ರಿಂದ 12 ಸಾವಿರ ರೂ.ಮಾರಾಟವಾಗುತ್ತಿದೆ.

ಒಂದೇ ವಾರದಲ್ಲಿ 5 ರಿಂದ 8 ಸಾವಿರ ಧಿಡೀರ್ ಕುಸಿತ ಕಂಡಿದೆ. ಕೊರೋನಾ ವೈರಸ್ ಎಫೆಕ್ಟ್ ನಿಂದಾಗಿ ಮೆಣಸಿನಕಾಯಿ ಚೀನಾಕ್ಕೂ ರಫ್ತಾಗುತ್ತಿಲ್ಲ ಎಂದು ರೈತ ಮುಖಂಡ ದರೂರು ಪುರುಷೋತ್ತಮ ಗೌಡ ಹೇಳುತ್ತಾರೆ.

ಚೀನಾದಲ್ಲಿ ಕೊರೋನಾ ವೈರಸ್ ಎಫೆಕ್ಟ್ ನಿಂದ ರಫ್ತು ದಿಢೀರ್ ಸ್ಥಗಿತಗೊಂಡಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ, ಸಿರುಗುಪ್ಪ, ಬಳ್ಳಾರಿ ತಾಲೂಕಿನಲ್ಲಿ ಅತಿ ಹೆಚ್ಚು ಕೆಂಪು ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತಿದೆ. ಬಳ್ಳಾರಿ ತಾಲೂಕಿನಲ್ಲಿಯೇ ಅತಿ ಹೆಚ್ಚು 70 ಸಾವಿರ ಹಾಗೂ ಕಂಪ್ಲಿ ತಾಲೂಕಿನಲ್ಲಿ 6250 ಎಕರೆಯಲ್ಲಿ ಮೆಣಸಿನ ಕಾಯಿ ಬೆಳೆ ಬೆಳೆಯಲಾಗಿದೆ.

ವಿಶೇಷವಾಗಿ ಕೆಂಪು ಮೆಣಸಿನಕಾಯಿಯಾದ ಡಬ್ಬಿ ಬ್ಯಾಡಗಿ, ಸಿಜೆಂಟಾ 341, 5, 531, 355, 4, 884 ತಳಿ ಮೆಣಸಿನಕಾಯಿ ಬೆಳೆಯಲಾಗಿದೆ. ಕಳೆದೊಂದು ತಿಂಗಳ ಹಿಂದೆ ಅಕಾಲಿಕ ಮಳೆಗೆ ಹೊಲ ಹಾಗೂ ಒಣಗಿಸುತ್ತಿದ್ದ ಕೆಂಪು ಮೆಣಸಿನಕಾಯಿ ಅರ್ದಕ್ಕರ್ದದಷ್ಟು ಬಲಿಯಾಯಿತು. ಇದೀಗ ಕರೋನಾ ಎಫೆಕ್ಟ್ ನಿಂದ ಬೆಲೆ ಧಿಡೀರ್ ಕುಸಿತವಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿಯೇ ಇಪ್ಪತ್ತು ಸಾವಿರಕ್ಕೂ ಹೆಚ್ಚು ರೈತರು ಹೆಚ್ಚಿನ ಬೆಲೆ ಸಿಗದೆ ಕಂಗಾಲಾಗಿದ್ದೇವೆ ಎಂದು ಮೆಣಸಿನಕಾಯಿ ಬೆಳೆದ ರೈತ ವೀರೇಶ್ ಗಂಗಾವತಿ ಅಲವತ್ತುಕೊಳ್ಳುತ್ತಾರೆ.

ಸದ್ಯ ಕರೋನಾ ವೈರಸ್ ಚೀನಾದಲ್ಲಿ ಈಗಾಗಲೇ ಬಲಿ ತೆಗೆದುಕೊಂಡು ನಮ್ಮ ದೇಶಕ್ಕೂ ಎಂಟ್ರಿ ಕೊಟ್ಟಿದೆ. ಬರೀ ಜೀವಗಳನ್ನು ಮಾತ್ರವಲ್ಲ, ನಮ್ಮ ರಾಜ್ಯದ ಮೆಣಸಿನಕಾಯಿ ಬೆಳೆದ ರೈತರಿಗೆ ಸಂಕಷ್ಟ ತಂದಿದೆ. ಚೀನಾ ದೇಶಕ್ಕೆ ನಮ್ಮ ಕೆಂಪು ಮೆಣಸಿನಕಾಯಿ ಡಿಮ್ಯಾಂಡ್ ಇದ್ದರೂ ರಫ್ತು ಮಾಡುವಂತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿತ ಕಂಡಿದೆ. ಇದರಿಂದ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಇದು ನುಂಗಲಾರದ ತುತ್ತಾಗಿದೆ.

Comments are closed.