ಕರ್ನಾಟಕ

ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಪ್ರವೀಣ್ ಸೂದ್

Pinterest LinkedIn Tumblr

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ, ಸಿಐಡಿಯ ಡಿಜಿಪಿ ಪ್ರವೀಣ್ ಸೂದ್ ಅವರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ನೀಲಮಣಿ ಎನ್. ರಾಜು ಶುಕ್ರವಾರ ನಿವೃತ್ತರಾಗಿದ್ದು, ಅವರ ಸ್ಥಾನಕ್ಕೆ ಪ್ರವೀಣ್ ಸೂದ್ ಆಯ್ಕೆ ಆಗಿದ್ದಾರೆ. ಡಿಜಿ-ಐಜಿಪಿ ಹುದ್ದೆಯ ರೇಸ್‍ನಲ್ಲಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಿದ್ದರು. ಸೇವಾ ಹಿರಿತನ ಹೊಂದಿರುವ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎಎಂ ಪ್ರಸಾದ್, ಸಿಐಡಿ, ಡಿಜಿಪಿ ಪ್ರವೀಣ್ ಸೂದ್, ನೇಮಕಾತಿ ವಿಭಾಗದ ಡಿಜಿಪಿ ಪಿ.ಕೆ ಗರ್ಗ್ ಹೆಸರುಗಳು ಡಿಜಿ-ಐಜಿಪಿ ರೇಸ್‍ನಲ್ಲಿ ಕೇಳಿಬಂದಿತ್ತು.

ಡಿಜಿ- ಐಜಿಪಿ ಹುದ್ದೆಗೆ ಸೇವಾ ಹಿರಿತನ ಹೊಂದಿರುವ ಈ ಮೂವರು ಹಿರಿಯ ಅಧಿಕಾರಿಗಳ ಹೆಸರುಗಳನ್ನು ರಾಜ್ಯ ಸರ್ಕಾರ ಕೇಂದ್ರ ಲೋಕಸೇವಾ ಆಯೋಗಕ್ಕೆ ಕಳಿಸಿಕೊಟ್ಟಿತ್ತು. ಈಗ ಕೇಂದ್ರ ಲೋಕಸೇವಾ ಆಯೋಗವು ಲಕೋಟೆ ಮೂಲಕ ಡಿಜಿ-ಐಜಿಪಿ ಹುದ್ದೆಗೆ ಆಯ್ಕೆ ಮಾಡಬೇಕಾದ ಹೆಸರುಗಳನ್ನು ಆಯ್ಕೆ ಮಾಡಿ ಕಳಿಸಿಕೊಟ್ಟಿದೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಕೇಂದ್ರ ಲೋಕಸೇವಾ ಆಯೋಗಕ್ಕೆ ಡಿಜಿ-ಐಜಿಪಿ ಹುದ್ದೆಗೆ ಆಯ್ಕೆ ಮಾಡಬೇಕಾದ ಸಂಭಾವ್ಯರ ಹೆಸರುಗಳನ್ನು ಆಯ್ಕೆ ಮಾಡಿತ್ತು.

ಈ ಪೈಕಿ 1985 ಕೇಡರಿನ ಅಧಿಕಾರಿ ಎ.ಎಂ ಪ್ರಸಾದ್ ಅವರಿಗೆ ಇನ್ನೂ 9 ತಿಂಗಳ ಸೇವಾವಧಿ ಇದೆ. 1986ನೇ ಕೇಡರಿನ ಅಧಿಕಾರಿಗಳಾದ ಪ್ರವೀಣ್ ಸೂದ್ ಅವರಿಗೆ ಇನ್ನೂ 2 ವರ್ಷ ಸೇವಾವಧಿ ಉಳಿದಿದ್ರೆ, ಪಿ ಕೆ ಗರ್ಗ್ ಅವರಿಗೆ 1.5 ವರ್ಷ ಸೇವಾವಧಿ ಇದೆ.

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯವರಾದ ಪ್ರವೀಣ್ ಸೂದ್ ಬಿ.ಟೆಕ್ ಪದವಿ ಓದಿದ್ದು ಬೆಂಗಳೂರು ಕಮಿಷನರ್ ಆಗಿಯೂ ಕೆಲಸ ಮಾಡಿದ್ದಾರೆ. 1989 ಮೈಸೂರು ಎಎಸ್ಪಿಯಾಗಿ ವೃತ್ತಿ ಆರಂಭಿಸಿದ ಇವರು ಬಳ್ಳಾರಿ, ರಾಯಚೂರಿನಲ್ಲಿ ಎಸ್‍ಪಿ ಆಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.

1999 ರಲ್ಲಿ ಮಾರಿಷಸ್ ದೇಶದ ಪೊಲೀಸ್ ಸಲಹೆಗಾರರಾಗಿ ಮೂರು ವರ್ಷ ಸೇವೆ ಸಲ್ಲಿಸಿದ ಪ್ರವೀಣ್ ಸೂದ್ ಅವರಿಗೆ 1996 ರಲ್ಲಿ ಮುಖ್ಯಮಂತ್ರಿಗಳ ಪದಕ, 2002ರಲ್ಲಿ ಪೊಲೀಸ್ ಪದಕ, 2004-07 ರಲ್ಲಿ ಮೈಸೂರು ಕಮೀಷನರ್ ಆಗಿ ಸೇವೆ ಸಲ್ಲಿಸಿದ್ದಾರೆ.

2008ರಲ್ಲಿ ಬೆಂಗಳೂರು ನಗರ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದ ಇವರಿಗೆ 2011 ರಲ್ಲಿ ರಾಷ್ಟ್ರಪತಿಗಳ ಪದಕಕ್ಕೆ ಭಾಜನರಾಗಿದ್ದರು. 2013-14 ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ ಮ್ಯಾನೆಜಿಂಗ್ ಡೈರೆಕ್ಟರ್, 2017 ರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ಕಮೀಷನರ್ ಆಗಿ ಹಲವು ಸುಧಾರಣೆ ತಂದಿದ್ದ ಪ್ರವೀಣ್ ಸೂದ್ ಬೆಂಗಳೂರು ನಾಗರೀಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದರು. ನಮ್ಮ 100, ಪಿಂಕ್ ಹೊಯ್ಸಳ, ಸುರಕ್ಷಾ ಅಪ್ಲಿಕೇಶನ್ ಇವರು ಆಯುಕ್ತರಾಗಿದ್ದಾಗ ಜಾರಿಯಾಗಿತ್ತು.

Comments are closed.