
ಬೆಂಗಳೂರು: ಜನದಟ್ಟಣೆ ಇರುವ ನಗರಗಳಲ್ಲಿ ಎಂಥೆಂಥಾ ವಿಚಾರಗಳೆಲ್ಲಾ ಜಗಳಕ್ಕೆ ಕಾರಣವಾಗುತ್ತೆ, ಪೊಲೀಸ್ ಕೇಸ್ ಆಗಿಬಿಡುತ್ತೆ ಅನ್ನೋದಕ್ಕೆ ಇಲ್ಲೊಂದು ಬೆಸ್ಟ್ ಎಕ್ಸಾಂಪಲ್ ಇದೆ. ಮಹಿಳೆಯರಿಬ್ಬರ ಬಟ್ಟೆ ಜಗಳ ಇದೀಗ ಕ್ರಿಮಿನಲ್ ಪ್ರಕರಣವಾಗಿ ಪರಿವರ್ತನೆಯಾಗಿದೆ.
ಏನಿದು ಬಟ್ಟೆ ಗಲಾಟೆ..?
ಬೆಂಗಳೂರಿನ ಶ್ರೀನಿವಾಸ ರೆಡ್ಡಿ ಲೇಔಟ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ ಟೆಕ್ಕಿ ದಂಪತಿಯೊಬ್ಬರು ನೆಲೆಸಿದ್ದಾರೆ. ಇವರು ನೆಲೆಸಿರುವ ಪಕ್ಕದ ಫ್ಲಾಟ್‌ನಲ್ಲೇ ಪ್ರೇಮಾ ಎಂಬುವರು ಇದ್ದಾರೆ. ಇವರಿಬ್ಬರ ನಡುವೆ ಯಾವಾಗಲೂ ಬಟ್ಟೆ ಒಣಗಿಸುವ ವಿಚಾರಕ್ಕೆ ಜಗಳ ಆಗುತ್ತಿತ್ತು. ಆದ್ರೆ, ಇದೀಗ ಆ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಟೆಕ್ಕಿ ದಂಪತಿ ತಮ್ಮ ಕೆಲಸ ಮುಗಿಸಿಕೊಂಡು ಎಂದಿನಂತೆ ಮನೆಗೆ ಬರುವ ವೇಳೆಗೆ ಸಂಜೆ 7.30ರ ಸಮಯವಾಗಿತ್ತು. ನೆರೆಮನೆಯ ಪ್ರೇಮಾ ಎಂಬಾಕೆ ಟೆಕ್ಕಿ ಮಹಿಳೆ ಜೊತೆ ಜಗಳಕ್ಕೆ ಇಳಿದರು. ಬಟ್ಟೆ ಒಣಗಿಸಲು ಇಷ್ಟೊಂದು ಜಾಗವನ್ನು ಏಕೆ ಕಬಳಿಸುತ್ತೀರಿ ಎಂದು ಪ್ರೇಮಾ ಅವರು ಟೆಕ್ಕಿ ಮಹಿಳೆ ಜೊತೆ ಜಗಳಕ್ಕೆ ಇಳಿದರು. ಜಗಳ ತಾರಕಕ್ಕೇರಿತು. ಒಂದು ಹಂತದಲ್ಲಿ ಟೆಕ್ಕಿ ಮಹಿಳೆಯನ್ನು ಪ್ರೇಮಾ ಅವರು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಲು ಯತ್ನಿಸಿದರು ಎಂದು ಆರೋಪಿಸಲಾಗಿದೆ. ಹೀಗಾಗಿ ಸಿಟ್ಟಿಗೆದ್ದ ಟೆಕ್ಕಿ ದಂಪತಿ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿದ್ಧಾರೆ.
ನೆರೆಮನೆಯಾಕೆ ಪ್ರೇಮಾ ಎಂಬುವರು ಆಗಾಗ ಸಣ್ಣಪುಟ್ಟ ವಿಚಾರಕ್ಕೇ ಕಾಲು ಕೆರೆದು ಜಗಳಕ್ಕೆ ಬರುತ್ತಾರೆ ಅನ್ನೋದು ಟೆಕ್ಕಿ ದಂಪತಿಯ ಆರೋಪ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ ಎಂದು ಟೆಕ್ಕಿ ದಂಪತಿ ಆರೋಪಿಸಿದ್ದಾರೆ. ಅಪಾರ್ಟ್‌ಮೆಂಟ್ ಕಟ್ಟಡದಿಂದ ಕೆಳಗೆ ತಳ್ಳಿ ಕೊಲೆ ಮಾಡುವ ಹಂತ ತಲುಪುವ ಮೂಲಕ ಪ್ರೇಮಾ ಅವರ ಕಾಟ ಮಿತಿ ಮೀರಿದೆ ಅನ್ನೋದು ಟೆಕ್ಕಿ ಮಹಿಳೆ ಆರೋಪ. ನೆರೆಹೊರೆಯ ಜನರು ಸರಿಯಾದ ಸಮಯಕ್ಕೆ ಬಂದು ಬಿಡಿಸದೇ ಇದ್ದರೆ ತುಂಬಾ ಕಷ್ಟವಾಗುತ್ತಿತ್ತು ಎಂದು ಆಕೆ ವಿವರಿಸಿದ್ದಾರೆ. ಇದೀಗ ಆರೋಪಿ ಮಹಿಳೆ ಪ್ರೇಮಾ ಅವರು ಎಚ್‌ಎಎಲ್ ಪೊಲೀಸರ ವಶದಲ್ಲಿದ್ದಾರೆ.
Comments are closed.