ಕರ್ನಾಟಕ

ಆಸ್ತಿಗಾಗಿ ಅಪ್ಪ, ಅಮ್ಮ, ಸಹೋದರನನ್ನೇ ಕೊಲೆಗೈದ ಪುತ್ರ

Pinterest LinkedIn Tumblr


ಬೆಳಗಾವಿ: ದೊಡ್ಡವಾಡ ಠಾಣಾ ವ್ಯಾಪ್ತಿಯ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.

ಶಿವಾನಂದ ಅಂದಾನಶೆಟ್ಟಿ, ಆತನ ಪತ್ನಿ ಶಾಂತವ್ವ ಮತ್ತು ಮಗ ವಿನೋದ್ ಕೊಲೆಯಾದವರು. ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಸ್ತಿ ಸಿಗದ ಕಾರಣ ಸಾಕು ಮಗನೇ ತನ್ನ ತಂದೆ, ಮಲ ತಾಯಿ ಹಾಗೂ ಸಹೋದರನನ್ನು ಕೊಚ್ಚಿ ಕೊಲೆ ಮಾಡಿರುವುದಾಗಿ ತನಿಖೆ ಸಂದರ್ಭದಲ್ಲಿ ಬಯಲಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ದೊಡ್ಡವಾಡ ಗ್ರಾಮದ ಶಿವಾನಂದ ಅಂದಾನಶೆಟ್ಟಿ ಹಾಗೂ ಕಸ್ತೂರಿ ದಂಪತಿಗೆ ಮಕ್ಕಳಿಲ್ಲದ ಕಾರಣಕ್ಕೆ ಶಿವಾನಂದನ ಸಹೋದರಿಯ ಮಗ ಶಿವಪ್ಪನನ್ನು ಸಾಕುತ್ತಿದ್ದರು. ಆದರೆ ಕಳೆದ 7 ವರ್ಷಗಳ ಹಿಂದೆ ಧಾರವಾಡ ಶಾಂತವ್ವಳನ್ನು ಶಿವಾನಂದ ಎರಡನೇ ಮದುವೆಯಾಗುತ್ತಾನೆ. ಇದರಿಂದ ಮನನೊಂದ ಕಸ್ತೂರಿ ಪತಿಯಿಂದ ದೂರವಾಗಿ ಅಳಿಯ ಗೋವಿಂದನ ಮನೆಯಲ್ಲಿ ವಾಸಮಾಡಲು ಶುರು ಮಾಡುತ್ತಾಳೆ.

ಈ ಮಧ್ಯೆ ಸಾಕುಮಗ ಶಿವಪ್ಪನಿಗೆ ಎಂದು ಮೀಸಲಿಟ್ಟಿದ್ದ 12 ಎಕರೆ ಜಮೀನನ್ನು ಶಾಂತವ್ವಳ ಮಗ ವಿನೋದನ ಹೆಸರಿಗೆ ಮಾಡುವುದಕ್ಕೆ ಶಿವಾನಂದ ಮುಂದಾಗಿದ್ದನು. ಇದು ಶಿವಪ್ಪನ ಕೋಪಕ್ಕೆ ಕಾರಣವಾಗುತ್ತದೆ. ಹಾಗಾಗಿಯೇ ವಿನೋದನ ಮದುವೆಗೆ ಕೇವಲ 10 ದಿನ ಬಾಕಿ ಉಳಿದಿರುವಾಗಲೇ ಸಾಕುತಂದೆ ಶಿವಾನಂದ ಅಂದಾನಶೆಟ್ಟಿ, ಆತನ ಪತ್ನಿ ಶಾಂತವ್ವ ಹಾಗೂ ಪುತ್ರ ವಿನೋದ್ ಈ ಮೂವರನ್ನೂ ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ ಎಂದು ಎಸ್‍ಪಿ ನಿಂಬರಗಿ ಹೇಳಿದ್ದಾರೆ.

ಈ ಕೊಲೆ ಸಂಚು ರೂಪಿಸಲು ಶಿವಪ್ಪನಿಗೆ ಸಹಕಾರ ನೀಡಿದ ಆತನ ಸಂಬಂಧಿಕರಾದ ಗೋವಿಂದ, ಬಸವಂತೆಪ್ಪ ಮತ್ತು ಮಲ್ಲಿಕಾರ್ಜುನ ಮೂವರನ್ನು ಬಂಧಿಸಲಾಗಿದೆ. ಕೇವಲ ನಾಲ್ಕು ದಿನಗಳಲ್ಲಿಯೇ ಈ ತ್ರಿವಳಿ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ ದೊಡ್ಡವಾಡ ಪೊಲೀಸರ ಕಾರ್ಯವನ್ನು ಎಸ್‍ಪಿ ಲಕ್ಷ್ಮಣ ನಿಂಬರಗಿ ಪ್ರಶಂಶಿಸಿ ಬಹುಮಾನ ಘೋಷಿಸಿದ್ದಾರೆ.

Comments are closed.