ಕರ್ನಾಟಕ

ನೃತ್ಯ ಮಾಡುತ್ತಲೇ ವಿದ್ಯಾರ್ಥಿನಿ ಸಾವು- ಕುಳಿತಲ್ಲೇ ನೋಡುತ್ತಿದ್ದ ಶಿಕ್ಷಕ

Pinterest LinkedIn Tumblr


ಕೋಲಾರ: ನೃತ್ಯಾಭ್ಯಾಸ ಮಾಡುವಾಗ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೇತಮಂಗಲ ಹೋಬಳಿಯ ಟಿ.ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪೂಜಿತಾ ಮೃತ ವಿದ್ಯಾರ್ಥಿನಿ. ಟಿ.ಗೊಲ್ಲಹಳ್ಳಿ ಗ್ರಾಮದ ಬಳಿ ಇರುವ ವಿಮಲ ಹೃದಯ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ನೃತ್ಯ ಮಾಡುವ ವೇಳೆ ವಿದ್ಯಾರ್ಥಿನಿ ಕುಸಿದು ಬಿದ್ದಿರುವ ದೃಶ್ಯಗಳು ಶಾಲೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶನಿವಾರ ಶಾಲಾ ವಾರ್ಷಿಕೋತ್ಸವ ಇದ್ದ ಹಿನ್ನೆಲೆಯಲ್ಲಿ ಗುರುವಾರ ವಿದ್ಯಾರ್ಥಿನಿ ತಮ್ಮ ಸ್ನೇಹಿತರೊಂದಿಗೆ ಶಾಲೆಯಲ್ಲಿ ನೃತ್ಯ ಅಭ್ಯಾಸವನ್ನ ಮಾಡುತ್ತಿದ್ದಳು. ಈ ವೇಳೆ ನೃತ್ಯ ಮಾಡುತ್ತಲೇ ವಿದ್ಯಾರ್ಥಿನಿ ಕುಸಿದು ಬಿದ್ದಿದ್ದಾಳೆ. ತಕ್ಷಣ ವಿದ್ಯಾರ್ಥಿನಿಯನ್ನ ಸ್ಥಳೀಯ ಬೇತಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.

ವಿದ್ಯಾರ್ಥಿನಿ ಕೆಳಗೆ ಕುಸಿದು ಬಿದ್ದರೂ ಶಿಕ್ಷಕನೋರ್ವ ಕುಳಿತಲ್ಲಿಯೇ ಇದ್ದು, ನಂತರ ಎರಡು ಜೇಬಲ್ಲಿ ಕೈಯಿಟ್ಟು ನಿಂತು ನೋಡುತ್ತಿದ್ದದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ ವಿದ್ಯಾರ್ಥಿನಿ ಕುಸಿದು ಬಿದ್ದ ತಕ್ಷಣ ಆಸ್ಪತ್ರೆಗೆ ಸಾಗಿಸದೆ ಶಾಲಾ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿಯ ಅಗಲಿಕೆಯಿಂದ ಶಾಲೆಯಲ್ಲಿ ನೀರವ ಮೌನ ಆವರಿಸಿದೆ.

ಮಧ್ಯಾಹ್ನ ಡ್ಯಾನ್ಸ್ ಮಾಡುತ್ತಿದ್ದಾಗ ವಿದ್ಯಾರ್ಥಿನಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಡ್ಯಾನ್ಸ್ ಶಿಕ್ಷಕರು ನೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ವಿದ್ಯಾರ್ಥಿನಿ ಪೋಷಕರು ಕೂಡ ಆಸ್ಪತ್ರೆಗೆ ಬಂದರು. ವೈದ್ಯರು ಪರಿಶೀಲನೆ ಮಾಡಿ ಹೃದಯಾಘಾತವಾಗಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಹೇಳಿರುವುದಾಗಿ ಪ್ರಿನ್ಸಿಪಾಲ್ ತಿಳಿಸಿದರು.

Comments are closed.