ಕರ್ನಾಟಕ

ಹೆಂಡತಿ, ಮಕ್ಕಳ ಮುಂದೆ ವ್ಯಕ್ತಿಯ ಹತ್ಯೆ

Pinterest LinkedIn Tumblr


ಮಂಡ್ಯ: ಪತ್ನಿ ಮತ್ತು ಮಕ್ಕಳನ್ನು ಕಟ್ಟಿ ಹಾಕಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ನಗರ ಪ್ರದೇಶದಲ್ಲಿ ಜರುಗಿದೆ.

ರಾಜಸ್ತಾನ ಮೂಲದ ಬುಂಡಾರಾಮ್ (27) ಕೊಲೆಯಾದ ವ್ಯಕ್ತಿ. ಮೃತ ಬುಂಡಾರಾಮ್ ಮಂಡ್ಯದ ವಿದ್ಯಾನಗರದ 2ನೇ ಕ್ರಾಸ್‍ನಲ್ಲಿ ವಾಸವಾಗಿದ್ದು, ಹಾರ್ಡ್ ವೇರ್ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದನು. ಸೋಮವಾರ ರಾತ್ರಿ ಮನೆಗೆ ಬಂದ ನಾಲ್ವರು ಮುಸುಕುಧಾರಿಗಳು ಬುಂಡಾರಾಮ್‍ನನ್ನು ಕೊಲೆಗೈದು ಪರಾರಿಯಾಗಿದ್ದಾರೆ.

ಏನಿದು ಪ್ರಕರಣ?
ಬುಂಡಾರಾಮ್ ಹಾಗೂ ಆತನ ಪತ್ನಿ ಮತ್ತು ಮಕ್ಕಳು ಮನೆಯಲ್ಲಿ ಮಲಗಿದ್ದರು. ಮಧ್ಯರಾತ್ರಿ 12 ಗಂಟೆಗೆ ನಾಲ್ವರು ಮುಸುಕುಧಾರಿಗಳು ಮನೆ ಬಾಗಿಲನ್ನು ಬಡಿದಿದ್ದಾರೆ. ಆಗ ಬುಂಡಾರಾಮ್ ಪತ್ನಿ ಮನೆಯ ಬಾಗಿಲನ್ನು ತೆರೆದಿದ್ದಾರೆ. ಮೊದಲು ಮುಸುಕುಧಾರಿಗಳು ಬುಂಡಾರಾಮ್ ಪತ್ನಿಯ ಬಾಯಿಯನ್ನು ಮುಚ್ಚಿದ್ದಾರೆ. ನಂತರ ಬುಂಡಾರಾಮ್‍ನನ್ನು ಹಿಡಿದುಕೊಂಡಿದ್ದಾರೆ ಎಂದು ಎಸ್‍ಪಿ ಪರಶುರಾಮ್ ತಿಳಿಸಿದರು.

ಈ ವೇಳೆ ಮಕ್ಕಳು ಅಳಲು ಶುರುಮಾಡಿದ್ದರು. ಆಗ ಹಂತಕರು ಬುಂಡಾರಾಮ್‍ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕಟ್ಟಿಹಾಕಿ ಬಾಯಿಗೆ ಬಟ್ಟೆ ತುರುಕಿದ್ದಾರೆ. ಬಳಿಕ ಬುಂಡಾರಾಮ್‍ನ ಕುತ್ತಿಗೆ ಭಾಗವನ್ನು ಚಾಕುವಿನಿಂದ ಕೊಯ್ದಿದ್ದಾರೆ. ಅಲ್ಲದೇ ಡ್ರ್ಯಾಗನ್‍ನಿಂದ ಎದೆಯ ಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದಾರೆ. ನಂತರ ಪತ್ನಿಯ ಮಾಂಗಲ್ಯ ಸರ ಹಾಗೂ ಮೂರು ಮೊಬೈಲ್‍ಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ ಎಂದು ಎಸ್‍ಪಿ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಬುಂಡಾರಾಮ್ ಪತ್ನಿ ಹಾಗೂ ಮಕ್ಕಳು ಅಕ್ಕ-ಪಕ್ಕದವರನ್ನು ಕೂಗಿದ್ದಾರೆ. ಆದರೆ ನೆರೆಹೊರೆಯವರು ಬರುವಷ್ಟರಲ್ಲಿ ತೀವ್ರ ರಕ್ತ ಸ್ರಾವದಿಂದ ಬುಂಡಾರಾಮ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Comments are closed.