ಕರ್ನಾಟಕ

ಪಿಎಫ್ಐ, ಎಸ್‌ಡಿಪಿಐ ನಿಷೇಧಕ್ಕೆ ತೀರ್ಮಾನಿಸಿದ ರಾಜ್ಯ ಸಚಿವ ಸಂಪುಟ

Pinterest LinkedIn Tumblr


ಬೆಂಗಳೂರು: ಪಿಎಫ್ಐ (ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ) ಹಾಗೂ ಎಸ್‌ಡಿಪಿಐ (ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್ ಇಂಡಿಯಾ ) ಸಂಘಟನೆಗಳ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸುದೀರ್ಘ‌ ಚರ್ಚೆ ನಡೆದು ಬೇರೆ, ಬೇರೆ ಹೆಸರಿನಲ್ಲಿ ರಾಜ್ಯದಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ಇತ್ತೀಚೆಗೆ ನಡೆದ ಹಲವು ಕೊಲೆ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಎರಡೂ ಸಂಘಟನೆಗಳ ಮೇಲೆ ಕ್ರಮಕ್ಕೆ ತೀರ್ಮಾನಿಸಲಾಗಿದೆ.

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಎರಡೂ ಸಂಘಟನೆಗಳ ನಿಷೇಧ ಹಾಗೂ ನಿಯಂತ್ರಣ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೂ ಶೀಘ್ರ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು. ಬೆಂಗಳೂರು, ಮೈಸೂರು, ಮಂಗಳೂರು ಭಾಗದಲ್ಲಿ ಕಳೆದ ಎಂಟು ವರ್ಷಗಳಿಂದ ನಡೆದಿ ರುವ ಕೊಲೆ ಹಾಗೂ ಕೊಲೆ ಸಂಚು, ಕಾನೂನು ಸುವ್ಯವಸ್ಥೆ ಹಾಳು ಮಾಡಲು ವ್ಯವಸ್ಥಿತ ಪಿತೂರಿ ಪ್ರಕರಣಗಳು ರಾಜ್ಯದ ಜನತೆಯಲ್ಲಿ ಆತಂಕ ಮೂಡಿಸಿವೆ. ಹಿಂಸೆ ಹಾಗೂ ಭಯೋತ್ಪಾದಕ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು.

ಸಿಎಎ ಪರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಹಿಂದೂಪರ ಕಾರ್ಯಕರ್ತ ವರುಣ್‌ ಮೇಲಿನ ಮಾರಣಾಂತಿಕ ಹಲ್ಲೆ, ಶಾಸಕ ತನ್ವೀರ್‌ ಸೇಠ್ ಮೇಲೆ ನಡೆದ ಹಲ್ಲೆ ಘಟನೆ, ಸಂಸದ ತೇಜಸ್ವಿ ಸೂರ್ಯ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ಹತ್ಯೆಗೆ ಯತ್ನ ಕೃತ್ಯಗಳ ಹಿನ್ನೆಲೆಯಲ್ಲಿ ಬಂಧಿತರಾದ ಹಾಗೂ ವಶಕ್ಕೆ ಪಡೆದವರ ವಿಚಾರಣೆಯಲ್ಲಿ ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಲು ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಚು ರೂಪಿಸಿರುವುದು ಪತ್ತೆಯಾಗಿದೆ. ಹೀಗಾಗಿ, ರಾಜ್ಯ ಸರ್ಕಾರವು ಇದನ್ನು ಗಂಭೀರ ವಾಗಿ ಪರಿಗಣಿಸಿದೆ. ಇದೇ ರೀತಿ ಹಲವಾರು ಸಂಘಟನೆಗಳು ನಾನಾ ಹೆಸರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಿದ್ಧತೆ ನಡೆಸಿರುವ ಬಗ್ಗೆಯೂ ಮಾಹಿತಿ ದೊರೆತಿದೆ ಎಂದು ತಿಳಿಸಿದರು.

ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಗಳು ಲಷ್ಕರೆ ತೊಯ್ಬಾ ಸೇರಿದಂತೆ ಹಲವು ಸಂಘ ಟನೆಗಳ ಜತೆ ಸಂಪರ್ಕ ಸಾಧಿಸಿರುವುದು ಗೊತ್ತಾಗಿದೆ. ಹಿಂದೆ ಇದ್ದ ಸಿಮಿ ಸಂಘಟನೆಯ ರೂಪಾಂತರವಾಗಿ ಬೇರೆ, ಬೇರೆ ಹೆಸರಿನಲ್ಲಿ ಸಂಘಟನೆಗಳು ಹುಟ್ಟಿಕೊಂಡಿವೆ. ತಮಿಳುನಾಡು, ಕೇರಳದ ಕೆಲವು ಭಾಗಗಳಲ್ಲಿ ನಡೆದಿರುವ ಘಟನೆ ಗಳು, ರಾಜ್ಯದಲ್ಲಿ ನಡೆದ ಕೃತ್ಯಗಳಲ್ಲಿ ಹಲವು ಸಂಘಟನೆಗಳು ಭಾಗಿಯಾಗಿವೆ. ಪಿಎಫ್ಐ, ಎಸ್‌ಡಿಪಿಐ ಉಗ್ರಗಾಮಿ ಸಂಘಟನೆಗಳು ರಾಜಕೀಯ ವಿಭಾಗಗಳಾಗಿ ಕೆಲಸ ಮಾಡುತ್ತಿರುವ ಮಾಹಿತಿಯೂ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವೈದ್ಯ ಕಾಲೇಜು ನಿರ್ಮಾಣಕ್ಕೆ ಟೆಂಡರ್‌ ಕರೆಯಲು ಅಸ್ತು: ಡಿ.ಕೆ.ಶಿವಕುಮಾರ್‌ ಪ್ರತಿನಿಧಿಸುವ ಕನಕಪುರದಿಂದ ಡಾ.ಸುಧಾಕರ್‌ ಸ್ವಕ್ಷೇತ್ರ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಲಾಗಿದ್ದ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಟೆಂಡರ್‌ ಕರೆಯಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ತೀವ್ರ ವಿವಾದ ಮೂಡಿಸಿದ್ದ ವೈದ್ಯಕೀಯ ಕಾಲೇಜು ಸ್ಥಳಾಂತರ ಡಿ.ಕೆ.ಶಿವಕುಮಾರ್‌ ಹಾಗೂ ಡಾ.ಕೆ.ಸುಧಾಕರ್‌ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.

ಅಂತಿಮವಾಗಿ ರಾಜ್ಯ ಸರ್ಕಾರ ಸುಧಾಕರ್‌ ಅವರ ಒತ್ತಡಕ್ಕೆ ಮಣಿದು ವೈದ್ಯಕೀಯ ಕಾಲೇಜು ಹಾಗೂ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ 508 ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆ ನೀಡಿದೆ.ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಹಿಂದೆಯೇ ಟೆಂಡರ್‌ ಕರೆಯಲು ನಿರ್ಧರಿಸಲಾಗಿತ್ತು.ಆದರೆ, ವೆಚ್ಚ 558 ಕೋಟಿ ರೂ.ಆಗಿತ್ತು. ಇದೀಗ ಆ ಮೊತ್ತವನ್ನು 508 ಕೋಟಿ ರೂ.ಗೆ ಇಳಿಸಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದ ನೂತನ ವೈದ್ಯಕೀಯ ಕಾಲೇಜುಗಳ ಪೈಕಿ ಹಾವೇರಿ ಹಾಗೂ ಯಾದಗಿರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ ತಲಾ 488.75 ಕೋಟಿ ರೂ.ವೆಚ್ಚದಲ್ಲಿ ಟೆಂಡರ್‌ ಕರೆಯಲು ಅನುಮೋದನೆ ನೀಡಲಾಗಿದೆ. ಎರಡೂ ಕಡೆ 100 ಸೀಟುಗಳಿಂದ 150 ಸೀಟುಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

ಯೋಜನಾ ಸಮಿತಿಗೆ ಉಸ್ತುವಾರಿ ಸಚಿವರದ್ದೇ ನೇತೃತ್ವ: ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಯೋಜನಾ ಸಮಿತಿಗಳಿಗೆ ಇನ್ನು ಮುಂದೆ ಜಿಪಂ ಅಧ್ಯಕ್ಷರಿಗೆ ಸ್ಥಾನವಿಲ್ಲ. ಬದಲಾಗಿ ಜಿಲ್ಲಾ ಉಸ್ತುವಾರಿ ಸಚಿವರೇ ನೇತೃತ್ವ ವಹಿಸಲಿದ್ದಾರೆ. ಜಿಲ್ಲಾ ಯೋಜನಾ ಸಮಿತಿಗಳಿಗೆ ಜಿಪಂ ಅಧ್ಯಕ್ಷರನ್ನು ಬಿಟ್ಟು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಧ್ಯಕ್ಷಗಿರಿ ನೀಡಲು ಹಾಗೂ ಅದಕ್ಕೆ ಚುನಾವಣೆ ನಡೆಸದಿರಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಯೋಜನಾ ಸಮಿತಿಗಳ ವ್ಯಾಪ್ತಿಗೆ ನಗರ ಸ್ಥಳೀಯ ಸಂಸ್ಥೆಗಳೂ ಬರುವುದರಿಂದ ಜಿಪಂ ಅಧ್ಯಕ್ಷರ ಬದಲಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಧ್ಯಕ್ಷ ಸ್ಥಾನ ನೀಡುವುದು ಸೂಕ್ತ ಎಂಬ ಅಭಿ ಪ್ರಾಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಐಟಿಐ ಕೋರ್ಸ್‌ಗಳಿಗೆ ಶುಲ್ಕ ನಿಗದಿ: ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ (ಐಟಿಐ) ಕೋರ್ಸ್‌ಗಳಿಗೆ ಹೆಚ್ಚು ಶುಲ್ಕ ಕಟ್ಟಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಸರ್ಕಾರವೇ ಇದೀಗ ತಾಂತ್ರಿಕ ಕೋರ್ಸ್‌ಗಳಿಗೆ ನಗರ ಪ್ರದೇಶಗಳಲ್ಲಿ 11,500 ರೂ., ಗ್ರಾಮೀಣ ಭಾಗದಲ್ಲಿ 10,500 ರೂ., ತಾಂತ್ರಿಕ ರಹಿತ ಕೋರ್ಸ್‌ಗಳಿಗೆ ನಗರ ಭಾಗದಲ್ಲಿ 9,200 ರೂ., ಗ್ರಾಮೀಣ ಭಾಗದಲ್ಲಿ 8,400 ರೂ. ನಿಗದಿಪಡಿಸಲು ಸಂಪುಟ ಅನುಮೋದನೆ ನೀಡಿದೆ.

ಸಂಪುಟದ ಇತರ ತೀರ್ಮಾನಗಳು
-ಕಾರವಾರದ 450 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಇನ್ನೂ 300 ಹೆಚ್ಚುವರಿ ಹಾಸಿಗೆಗಳಿಗೆ ವಿಸ್ತರಿಸಲು 144 ಕೋಟಿ ರೂ. ಮೊತ್ತದ ಯೋಜನೆಗೆ ಒಪ್ಪಿಗೆ.

-ಮೈಸೂರಿನ ಟಿಬಿ ಆಸ್ಪತ್ರೆ ಆವರಣದಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್‌ ನಿರ್ಮಾಣಕ್ಕೆ 42ಕೋಟಿ ರೂ.

-ವಿಜಯನಗರ ವೈದ್ಯಕೀಯ ಸಂಸ್ಥೆ ಆವರಣದಲ್ಲಿ ಉಪನ್ಯಾಸಕರ ಕೊಠಡಿಗಳಿಗೆ 40.50 ಕೋಟಿ ರೂ.

-ಬೆಂಗಳೂರು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ 450 ಹಾಸಿಗೆಗಳ ಹೊಸ ಆಸ್ಪತ್ರೆಗೆ 132.31 ಕೋಟಿ ರೂ.

-ಮೈಸೂರು ವೈದ್ಯಕೀಯ ಕಾಲೇಜು ಆವರಣದಲ್ಲಿ ಹಾಸ್ಟೆಲ್‌ಗೆ
42 ಕೋಟಿ ರೂ.

-ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ಮೂಲಸೌಕರ್ಯಕ್ಕೆ 20 ಕೋಟಿ ರೂ.

-ಕಲುಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಆವರಣದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆ ಸ್ಥಾಪನೆಗೆ 150 ಕೋಟಿ ರೂ.ಬಿಡುಗಡೆಗೆ ಒಪ್ಪಿಗೆ.

ಉತ್ತರ ಪ್ರದೇಶದಲ್ಲಿ ಈಗಾಗಲೇ ಇಂತಹ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಅಲ್ಲಿನ ಸರ್ಕಾರ ಮುಂದಾಗಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳಲಿದೆ. ಯಾವುದೇ ಸಂಘಟನೆಯನ್ನು ನಿಷೇಧಿಸುವ ಮುನ್ನ ಕೆಲವು ಪ್ರಕ್ರಿಯೆ ನಡೆಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ.

Comments are closed.