ಕರ್ನಾಟಕ

ರಾಜ್ಯಕ್ಕೆ ಅಮಿತ್​ ಶಾ ಆಗಮಿಸುವ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ನಿರ್ಧಾರ: ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು: ರಾಜ್ಯ ಸಂಪುಟ ವಿಸ್ತರಣೆ ಕುರಿತು ಚರ್ಚೆಗೆ ಪ್ರತಿಬಾರಿಯೂ ಹೈ ಕಮಾಂಡ್​​ ಅನುಮತಿ ನಿರಾಕರಿಸುತ್ತಿದ್ದು, ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನೂತನ ಬಿಜೆಪಿ ಶಾಸಕರು ಒತ್ತಡ , ಹಿರಿನಾಯಕರ ಪಟ್ಟಿಗೆ ನಲುಗಿರುವ ಅವರು, ಈಗ ರಾಜ್ಯಕ್ಕೆ ಅಮಿತ್​ ಶಾ ಆಗಮಿಸುವ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಸೂಚನೆ ಪಡೆಯುವುದಾಗಿ ತಿಳಿಸಿದ್ದಾರೆ.

ಚಿಕ್ಕಮಗಳೂರು ಪ್ರವಾಸಕ್ಕೆ ಮುನ್ನ ಈ ಕುರಿತು ಇಂದು ಮಾತನಾಡಿದ ಅವರು, ಜ.17ರಂದು ರಾಜ್ಯಕ್ಕೆ ಅಮಿತ್​ ಶಾ ಅವರೇ ಆಗಮಿಸುತ್ತಾರೆ. ಅವರು ಬಂದ ಸಮಯದಲ್ಲಿ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಾಗುವುದು. ಈ ವೇಳೆ ಅಮಿತ್ ಶಾ ಜೊತೆ ನಿರ್ಧರಿಸಿ, ಒಪ್ಪಿಗೆ ಪಡೆಯಲಾಗುವುದು ಎಂದು ಪ್ರತಿಕ್ರಿಯಿಸಿದರು.

ಇನ್ನು ಇಂದು ದೆಹಲಿಗೆ ತೆರಳಬೇಕಿದ್ದ ತಮ್ಮ ಕಾರ್ಯಕ್ರಮ ರದ್ದಾಗಿರುವ ಕುರಿತು ಮಾತನಾಡಿದ ಅವರು, ಇಂದು ಮತ್ತು ನಾಳೆ ರಾಜ್ಯದ ಜಿಲ್ಲಾ ಪ್ರವಾಸ ಮಾಡುತ್ತಿದ್ದೇನೆ. ಹಲವು ಕಾರ್ಯಕ್ರಮ ಹಿನ್ನೆಲೆ ಪ್ರವಾಸವನ್ನು ಮೊಟಕುಗೊಳಿಸಲಾಗಿದೆ ಎಂದರು.

ಉಪಚುನಾವಣೆಯಾಗಿ ತಿಂಗಳು ಕಳೆದರೂ ಸಂಪುಟ ವಿಸ್ತರಣೆ ಕಗ್ಗಂಟಾಗಿ ಉಳಿದಿದ್ದು, ಸರ್ಕಾರ ರಚಿಸುವಲ್ಲಿ ಸಹಾಯಮಾಡಿದ 17 ರೆಬೆಲ್​ ಶಾಸಕರು ಕೂಡ ತಮಗೆ ಸಚಿವ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇನ್ನು ಪಕ್ಷದಲ್ಲಿನ ಹಿರಿಯ ನಾಯಕರು ಕೂಡ ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳಾಗಿರುವ ಹಿನ್ನೆಲೆ, ಉಪಚುನಾವಣೆಯಲ್ಲಿ ಗೆದ್ದಿರುವ 11 ಜನರಲ್ಲಿ ಕೇವಲ 9 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುವುದು ಎಂಬ ಮಾತು ಪಕ್ಷದಲ್ಲಿ ಕೇಳಿ ಬರುತ್ತಿದೆ.

ನಮಗೆ ಸಚಿವ ಸ್ಥಾನದ ಭರವಸೆ ನೀಡಿರುವುದು ಬಿಜೆಪಿ ಹೈ ಕಮಾಂಡ್​ ಅಲ್ಲ. ಬಿಎಸ್​ ಯಡಿಯೂರಪ್ಪ ಅವರು, ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳಬೇಕು ಎಂದು ರೆಬೆಲ್​ ನಾಯಕರು ಎಚ್ಚರಿಕೆಯನ್ನು ಕೂಡ ಈಗಾಗಲೇ ನೀಡಿದ್ದಾರೆ.

Comments are closed.