ಗಲ್ಫ್

“ಧ್ವನಿ ಶ್ರೀರಂಗ” ಅಂತಾರಾಷ್ಟ್ರೀಯ ಪ್ರಶಸ್ತಿಗೆ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಆಯ್ಕೆ

Pinterest LinkedIn Tumblr

ದುಬೈ: ಧ್ವನಿ ಪ್ರತಿಷ್ಠಾನ ಕನ್ನಡ ರಂಗಭೂಮಿಯಲ್ಲಿ ವಿಶೇಷ ಸೇವೆಗೈದವರನ್ನು ಗುರುತಿಸಿ ಕಳೆದ ಹನ್ನೆರಡು ವರ್ಷಗಳಿಂದ ನೀಡುತ್ತಾ ಬರುತ್ತಿರುವ “ಧ್ವನಿ ಶ್ರೀರಂಗ” ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಗೆ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಅವರು ಅಯ್ಕೆ ಗೊಂಡಿರುವರು.ಇವರು ಕನ್ನಡ ರಂಗ ಕ್ಷೇತ್ರಕ್ಕೆ ತಮ್ಮ ವಿಭಿನ್ನ ನಾಟಕಗಳ ಮುಖಾಂತರ ಹೊಸತನವನ್ನು ಮೂಡಿಸಿರುವುದಲ್ಲದೆ ಕವಿಯಾಗಿಯು ಅಗ್ರಗಣ್ಯರಾಗಿರುವರು.

ಅಧುನಿಕ ನಾಟಕಗಳ ಬ್ರಹ್ಮ ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಅಂತಾರಾಷ್ಟ್ರೀಯ ನೆಲೆಯಲ್ಲಿ ಕೊಡಮಾಡುವ ಈ ರಂಗ ಪ್ರಶಸ್ತಿ ದುಬೈಯ ಪ್ರಯಾಣ, ಮೂರುದಿನಗಳ ವಸತಿ ವೆಛ್ಚ ಹಾಗೂ 25,000 ನಗದು ಮತ್ತು ಸ್ಮರಣಿಕೆಯನ್ನು ಹೊಂದಿದೆ. (ಈ ತನಕ ಬಿ.ಜಯಶ್ರೀ, ಟಿ.ಎಸ್.ನಾಗಭರಣ, ಶ್ರೀನಿವಾಸ ಕಪ್ಪಣ್ಣ, ಮುಖ್ಯಮಂತ್ರಿ ಚಂದ್ರು,ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಡಾ. ಹೆಚ್.ಎಸ್. ಶಿವಪ್ರಕಾಶ್, ಶ್ರೀಮತಿ ಉಮಾಶ್ರೀ, ಡಾ. ನಾ.ದಾ.ಶೆಟ್ಟಿ, ಗಿರಿಜಾ ಲೋಕೇಶ್, ಶ್ರೀ ಸಿ.ಕೆ.ಗುಂಡಣ್ಣ ಮುಂತಾದವರು ಭಾಜಕರಾಗಿರುವರು). ಪ್ರಶಸ್ತಿಯನ್ನು ದುಬಾಯಿಯ ಏಮಿರೇಟ್ಸ್ ಥಿಯೇಟರ್ ನಲ್ಲಿ 14-02-2020ರ ಶುಕ್ರವಾರ ಸಂಜೆ ನಡೆಯಲಿರುವ ಧ್ವನಿ ಪ್ರತಿಷ್ಠಾನದ ಮೂವತ್ತೈದನೇ ವಾರ್ಷಿಕೋತ್ಸವ ಸಮಾರಂಭ “ರಂಗಸಿರಿ ಉತ್ಸವ 2020″ದಲ್ಲಿ ಪ್ರದಾನಿಸಲಾಗುವುದು.

ಇದೇ ಸಂದರ್ಭದಲ್ಲಿ ಗಿರೀಶ್ ಕಾರ್ನಾಡರ “ಮದುವೆಯ ಆಲ್ಬಮ್ “ನಾಟಕವನ್ನು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ರಂಗವೇರಿಸಲಾಗುವುದು.ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕಾಗಿ ಆಯೋಜಕರು ವಿನಂತಿಸಿಕೊಂಡಿರುವರು.

Comments are closed.